ಕಲಬುರಗಿ, ಸೆ.17 : ಕರ್ನಾಟಕದ ಗಾಂಧಿ ಹೈದರಾಬಾದ್ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಕಲಬುರಗಿಯ ಕೊಲೂರು ಮಲ್ಲಪ್ಪ ಅವರು ಚುನಾವಣೆ ಬಂದಾಗಲೆಲ್ಲಾ ನೆನಪಾಗುತ್ತಾರೆ. ಜವಾಹರಲಾಲ್ ನೆಹರು ಇವರನ್ನು ತಮ್ಮ ಸಂಪುಟದ ಮಂತ್ರಿ ಮಾಡುವುದಾಗಿ ಆಹ್ವಾನಿಸಿದರೂ ಕೊಲೂರು ನಯವಾಗಿ ಬೇಡ ಎಂದರು. ಮುಂದೆ, ಇಂದಿರಾ ಗಾಂಧಿ ಅವರು ಮುಖ್ಯಮಂತ್ರಿ ಮಾಡಲು ಮುಂದಾದರೂ ಮಲ್ಲಪ್ಪ ಅದನ್ನು ಒಪ್ಪಲಿಲ್ಲ . ತಮ್ಮ ರಾಜಕೀಯ ಮಿತಿ, ಶಕ್ತಿ-ಸಾಮರ್ಥ್ಯ ಬಲ್ಲ ದೊಡ್ಡ ಔದಾರ್ಯತೆ ಅವರದ್ದು. ಮಲ್ಲಪ್ಪ ಅವರು ನೆಹರುಗೆ ಪರಮಾಪ್ತರಾಗಿದ್ದರು. ಇಬ್ಬರೂ ಕೂಡಿ ಊಟ ಮಾಡುವಾಗ ಇಂದಿರಾಗಾಂಧಿ ಊಟ ಬಡಿಸುತ್ತಿದ್ದರು. ನೆಹರು ನಿಧನದ ಬಳಿಕ ಇಂದಿರಾಗೆ ಆಪ್ತರಾಗಿದ್ದ ಮಲ್ಲಪ್ಪಅವರಿಗೆ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದರು. 1968 ಮತ್ತು 1974 ಹಾಗೂ 1984ರಲ್ಲಿ ಹೀಗೆ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಇವರಿಗೆ ಕರ್ನಾಟಕದ ಮುಖ್ಯಮಂತ್ರಿ ಮಾಡುವುದಾಗಿ ಇಂದಿರಾ ಗಾಂಧಿ ಪ್ರಸ್ತಾಪಿಸಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿ ಮುಂದೆ ಡಿ. ದೇವರಾಜ ಅರಸು ಅವರನ್ನು ಸಿಎಂ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ ಅಡಿ ರಾಜ್ಯ ವಿಧಾನಮಂಡಲದ ಗ್ರಂಥಾಲಯ ಸಮಿತಿ ಪ್ರಕಟಿಸಿದ ಕೃತಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಕುರುಬ ಸಮಾಜದ ಲಿಂಗಪ್ಪ-ಭೀಮವ್ವ ದಂಪತಿ ಪುತ್ರ. 1905ರಲ್ಲಿ ಯಾದಗಿರಿ ತಾಲೂಕಿನ ಪೊಗಲಾಪುರದಲ್ಲಿ ಜನನ. ಆರಂಭದಲ್ಲಿ ಕುರಿಗಾಹಿಯಾಗಿದ್ದ ಇವರು ಕಷ್ಟದಲ್ಲಿಯೇ ಏಳನೇ ತರಗತಿವರೆಗೆ ಓದಿ ಸ್ಟ್ಯಾಂಪ್ ಮಾರಾಟ ಗುತ್ತಿಗೆ ಹಿಡಿದು, ಹರಗೋಲು ಗುತ್ತಿಗೆ, ಉಣ್ಣೆ ವ್ಯಾಪಾರ ಮಾಡುತ್ತ ಮೇಲೆ ಬಂದರು.
ಹೈಕ ವಿಮೋಚನಾ ಚಳವಳಿಯಲ್ಲಿ ಇವರ ಹೋರಾಟ ಅನನ್ಯ. 1934ರಲ್ಲಿ ಸಾಬರಮತಿಯಲ್ಲಿ ಗಾಂಧೀಜಿ ಅವರನ್ನು ಭೇಟಿಯಾಗಿ ಪ್ರೇರಣೆ ಪಡೆದರು. ಹೈದರಾಬಾದ್ ನಿಜಾಮ ಸರಕಾರದ ದಬ್ಬಾಳಿಕೆ ವಿರುದ್ಧ ಹೋರಾಟಕ್ಕೆ ಇಳಿದಾಗ ಕೆಂಗಣ್ಣಿಗೆ ಗುರಿಯಾದರು. 1940ರಲ್ಲಿ ಇವರನ್ನು ನಿಜಾಂ ಸರಕಾರ ಬಂಧಿಸಿ ಒಂದೂವರೆ ವರ್ಷ ಜೈಲಿಗೆ ತಳ್ಳಿತ್ತು. 1942ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಹೋದ ಹೈಕ ಭಾಗದ ಮೊದಲ ವ್ಯಕ್ತಿಯೂ ಇವರಾಗಿದ್ದಾರೆ. ಕುಷ್ಠಪೀಡಿತರ ಸೇವೆ ಮತ್ತು ಚಿಕಿತ್ಸೆಗಾಗಿ 1981ರಲ್ಲಿ ಜನತಾ ಟ್ರಸ್ಟ್ ಸ್ಥಾಪಿಸಿದ್ದ ಮಲ್ಲಪ್ಪ ಅವರು, ಅದರ ಭಾಗವಾಗಿ ಈ ರೋಗಿಗಳಿಗೆ ಪುನರ್ವಸತಿಗಾಗಿ ತಮ್ಮ ಎಲ್ಲ ಆಸ್ತಿಯನ್ನೂ ಮಾರಾಟ ಮಾಡಿದರು ಎನ್ನುವುದು ಗಮನಾರ್ಹ ಸಂಗತಿ.
– ದೇವಯ್ಯ ಗುತ್ತೇದಾರ್ ಕಲಬುರಗಿ