ಲಿಂ| ಪ್ರಭುರಾಜೇಂದ್ರ ಶ್ರೀ ಆದರ್ಶ ಎಲ್ಲರಿಗೂ ಸ್ಫೂರ್ತಿ

Udayavani News
0
ವರದಿ:ಶರಣಪ್ಪ ಹೆಳವರ,ಬಾಗಲಕೋಟೆ
ಅಮೀನಗಡ ಸೆ.13 : ಲಿಂಗೈಕ್ಯ ಪ್ರಭುರಾಜೇಂದ್ರ ಸ್ವಾಮೀಜಿಗಳು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿದ್ದಾರೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಅಮೀನಗಡ:ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರಭುಶಂಕರೇಶ್ವರ ಗಚ್ಚಿನಮಠದಿಂದ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಸ್ವಾಮೀಜಿಗಳ ೧೦೮ನೇ ಜಯಂತ್ಯುತ್ಸವದ ನಿಮಿತ್ತ ಆರಂಭವಾದ ವಚನ ಪ್ರವಚನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಆದರೆ ಇದರ ಮಹತ್ವ ಅರಿತ ಪ್ರಭುರಾಜೇಂದ್ರ ಸ್ವಾಮಿಜಿಗಳು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿದ್ದಾರೆ ಎಂದರು.

ಶಿಸ್ತು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಜತೆಗೆ ಪಕ್ಷಿ ಹಾಗೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶ್ರೀಗಳು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದ ಶಾಸಕರು ಅವರೊಂದಿಗೆ ಹಲವು ವಿಚಾರಗಳ ಕುರಿತು ಮಾರ್ಗದರ್ಶನ ಪಡೆದಿದ್ದನ್ನು ನೆನಪಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಶಂಕರರಾಜೇಂದ್ರ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯುತ್ತಿರುವುದಲ್ಲದೆ ಶ್ರೀಮಠದ ಆದಾಯ ಹೆಚ್ಚಿಸುವಲ್ಲಿ ನಾನಾ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು.

ಉಪಪ್ರಾಚಾರ್ಯ ಆರ್.ಜಿ.ಸನ್ನಿ ಮಾತನಾಡಿ, ೧೧ನೇ ಪೀಠಾಧಿಪತಿಯಾಗಿದ್ದ ಪ್ರಭುರಾಜೇಂದ್ರ ಸ್ವಾಮೀಜಿ ಮಾತೃ ಹೃದಯಿಯಾಗಿದ್ದರು. ನಾಡಿನಾದ್ಯಂತ ಸಂಚರಿಸಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ ಎಂದರು.

ಸ್ಥಳೀಯ ಶ್ರೀಮಠದ ಶಂಕರರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಾಲಕೇರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಡಗುಂದಿ-ಕೊಪ್ಪದ ಶಿವಯೋಗಮಂದಿರ ಶಾಖಾ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಜಂಬಗಿ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಸ್ವಾಮೀಜಿ ಪ್ರವಚನದ ಅನುಭಾವ ಹೇಳಿದರು.

ಚಿಕಲಪರ್ವಿ ರುದ್ರಮುನಿಶ್ವರಮಠದ ಸದಾಶಿವ ಸ್ವಾಮೀಜಿ, ನಿರಂಜನ ದೇವರು, ಶರಣಬಸವ ದೇವರು, ವಿಜಯಪುರದ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ, ಹಡಗಲಿಯ ಶಂಕ್ರಪ್ಪ ನೇಗಲಿ, ಪಿಎಸ್‌ಐ ಎಂ.ಜಿ.ಕುಲಕರ್ಣಿ, ಪಪಂ ಸದಸ್ಯರಾದ ಬಾಬು ಛಬ್ಬಿ, ವಿದ್ಯಾ ರಾಮವಾಡಗಿ, ಫಾತಿಮಾ ಅತ್ತಾರ, ಸಂತೋಷ ಐಹೊಳ್ಳಿ, ಶ್ರೀದೇವಿ ನಿಡಗುಂದಿ, ಬಸಪ್ಪ ಬೇವೂರ, ತುಕ್ಕಪ್ಪ ಲಮಾಣಿ, ವಿಜಯಕುಮಾರ ಕನ್ನೂರ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಹುಲಗಿನಾಳ, ಗಂಗೂರ, ಚಿತ್ತರಗಿ, ಹಡಗಲಿ ಗ್ರಾಮದ ಹಿರಿಯರಿಗೆ ಶ್ರೀಮಠದಿಂದ ಗೌರವ ಶ್ರೀರಕ್ಷೆ ನೀಡಲಾಯಿತು. ಜಗನ್ಮಾತಾ ಸತ್ಸಂಗ ಬಳಗದಿಂದ ಸಂಗೀತ ಸೇವೆ ನಡೆಯಿತು. ಗೋಲಪ್ಪ ಶಾಂತಗೇರಿ, ಶಿವಶಂಕ್ರಪ್ಪ ಶಾಂತಗೇರಿ ಹಾರ್ಮೋನಿಯಂ, ಮಲ್ಲಿಕಾರ್ಜುನ ಯರಗೇರಿ ತಬಲಾ ಸಾಥ್ ನೀಡಿದರು. ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಆರ್.ಜಿ.ಸನ್ನಿ ನಿರೂಪಿಸಿದರು. ಪ್ರಾಚಾರ್ಯ ಎಂ.ಎನ್.ವಂದಾಲ ನಿರ್ವಹಿಸಿದರು.

Post a Comment

0Comments

Post a Comment (0)