ಆಹಾರ ವಿಚಾರದಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭಾವನೆಯು ಸರ್ವಥಾ ಸರಿಯಲ್ಲ.
ನಿರ್ದಿಷ್ಟ ಸಂದರ್ಭದಲ್ಲಿ ಸಮಾಜದ ಒಂದು ವರ್ಗ ಮಾಂಸ ಸೇವನೆ ಮಾಡುವುದಿಲ್ಲ ಎಂಬ ಕಾರಣ ನೀಡಿ ಪ್ರಭುತ್ವವು ಇತರರು ಆ ಸಂದರ್ಭದಲ್ಲಿ ಮಾಂಸ ಸೇವಿಸುವಂತಿಲ್ಲ ಎಂದು ಹೇಳಲು ಅವಕಾಶವಿಲ್ಲ. ಅಷ್ಟೇ ಅಲ್ಲ ಆ ಸಂದರ್ಭದಲ್ಲಿ ಮಾಂಸ ಮಾರಾಟ ಮಾಡಬೇಡಿ, ಮಾಂಸ ಖರೀದಿ ಮಾಡಬೇಡಿ ಎಂದು ಕೂಡ ನಿರ್ದೇಶನ ನೀಡುವಂತಿಲ್ಲ. ಮಾಂಸವು ಈ ದೇಶದ ಬಹುಜನರ ಆಹಾರ.ಈ ವಿಚಾರದಲ್ಲಿ ಪೋಲಿಸ್ ಗಿರಿ ನಡೆಸುವುದಕ್ಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಮಾಂಸದ ಅಂಗಡಿ ತೆರೆಯಬೇಡಿ ಎಂದು ಹೇಳುವುದು ಕೆಲವು ಹಿಂದುತ್ವ ಸಂಘಟನೆಗಳ ಪಾಲಿಗೆ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಒಂದು ಅಸ್ತ್ರವೂ ಹೌದು. ಜಾತ್ರೆಗಳ ಸಂದರ್ಭದಲ್ಲಿ ಜಾತ್ರೆ ನಡೆಯುವಲ್ಲಿ ಮುಸ್ಲಿಮರು ಅಂಗಡಿ ತೆರೆಯಬಾರದು ಎನ್ನುವ ನಿಲುವಿನ ಮತ್ತೊಂದು ರೂಪ ಇದು.
ಜನರಿಗೆ ತಮ್ಮ ಆಹಾರ ಯಾವುದಿರಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಇದೆ ಎಂಬ ಮಾತನ್ನು ದೇಶದ ನ್ಯಾಯಾಲಯಗಳು ಹಲವು ಆದೇಶಗಳಲ್ಲಿ ಸ್ಪಷ್ಟವಾಗಿ ಹೇಳಿವೆ 2017ರ ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆಹಾರ ಪದ್ದತಿ ಏನಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಖಾಸಗಿತನದ ಹಕ್ಕುಗಳ ಒಂದು ಭಾಗ ಅದನ್ನು ರಕ್ಷಿಸಬೇಕು ಎಂದು ಹೇಳಿದೆ. ಇನ್ನೊಂದು ತೀರ್ಪಿನಲ್ಲಿ ಕೋರ್ಟ್ ವ್ಯಕ್ತಿಯೊಬ್ಬ ಆಹಾರವಾಗಿ ಏನನ್ನು ಸೇವಿಸುತ್ತಾನೆ ಎಂಬುದನ್ನು ಆತನ ವೈಯಕ್ತಿಕ ವಿಚಾರ ಅದು ನಮ್ಮ ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವ ಖಾಸಗಿತನದ ಸ್ವಾತಂತ್ರ್ಯದ ಭಾಗ ಎಂದು ಹೇಳಿದೆ.ಮಾಂಸದ ವ್ಯಾಪಾರದಲ್ಲಿ ತೊಡಗಿರುವವರಿಗೆ ಅವರ ವೃತ್ತಿಯನ್ನು ನಡೆಸಿಕೊಂಡು ಹೋಗುವ ಹಕ್ಕು ಇದೆ. ಈ ಹಕ್ಕನ್ನು ಒಂದಿಷ್ಟು ಅವಧಿಗೆ ನಿರ್ಬಂಧಿಸಲು ಅವಕಾಶ ಇಲ್ಲ ಎಂದು ಕೂಡ ಕೋರ್ಟ್ ಗಳು ಸ್ಪಷ್ಟ ಪಡಿಸಿವೆ. 2017 ರಲ್ಲಿ ಬಾಂಬೆ ಕೋರ್ಟ್ ನೀಡಿರುವ ಆದೇಶವು ನಿರ್ದಿಷ್ಟ ಆಹಾರ ಸೇವನೆ ಮಾಡಬೇಡಿ ಎಂದು ಪ್ರಭುತ್ವ ಪ್ರಜೆಗಳಿಗೆ ಹೇಳುವುದು ನಿರ್ದಿಷ್ಟ ಆಹಾರವನ್ನು ಜನ ಇಟ್ಟುಕೊಳ್ಳುವುದನ್ನು ತಡೆಯುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ. ನ್ಯಾಯಾಲಯಗಳು ಹೇಳಿರುವ ಈ ಮಾತುಗಳನ್ನು ಈಗ ಕಣ್ಣಿಗೆ ರಾಚುವಂತೆ ಉಲ್ಲಂಘನೆ ಮಾಡಲಾಗಿದೆ. ಇದು ವಿಭಜನಕಾರಿ ರಾಜಕಾರಣ. ಇಂತಹ ನಡೆಗಳನ್ನು ಈಗ ಪ್ರಭುತ್ವ ಬೆಂಬಲಿಸುತ್ತಿದೆ.
"ಪ್ರತಿಯೊಂದು ಧರ್ಮವೂ ಭಗವಂತನ ಸಾಕ್ಷಾತ್ಕಾರಕ್ಕೆ ಒಂದೊಂದು ಮಾರ್ಗ. ವಿವಿಧ ದಿಕ್ಕುಗಳಿಂದ ಹರಿದುಬಂದ ನದಿಗಳೆಲ್ಲವೂ ಸಾಗರದಲ್ಲಿ ಐಕ್ಯವಾಗುವ ಹಾಗೆ ಇದು ಕೂಡಾ".
-ರಾಮಕೃಷ್ಣ ಪರಮಹಂಸ
-ಭೀಮು ಕೋಲಿ
ರಾಜ್ಯಾಧ್ಯಕ್ಷರು ಯುವ ಘಟಕ
ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ