ಸುರಪುರ ಸುದ್ದಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಂಜಲಾಪುರಹಳ್ಳಿ ಗ್ರಾಮದ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.
ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ, ಎಂಬ ನುಡಿಯಂತೆ ಬಡತನದಲ್ಲಿ ಹುಟ್ಟಿದ್ದೇವೆ ಎಂದು ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳುವ ಬದಲು ಜೀವನದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ತೊಟ್ಟು ಗುರಿಯ ಕಡೆಗೆ ಸಾಗಬೇಕು ಎಂದು ತಾಲೂಕಿನ ಮಂಜಲಾಪುರಹಳ್ಳಿಯ ಗ್ರಾಮೀಣ ಯುವಕ ತೋರಿಸಿಕೊಟ್ಟಿದ್ದಾನೆ.
ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ಆಯ್ಕೆಯಾಗಿ ಏಳು ತಿಂಗಳುಗಳ ಕಾಲ ತರಬೇತಿ ಮುಗಿಸಿ ಮರಳಿ ಸ್ವಗ್ರಾಮಕ್ಕೆ ತೆರಳಿದಾಗ ಗ್ರಾಮದಲ್ಲಿ ಸಂತಸದ ಜೊತೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ವೀರ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡ ಗ್ರಾಮಸ್ಥರು
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ, ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಣಸಗಿಯ ಪಟ್ಟಣ ಪಂಚಾಯಿತಿ ಸದಸ್ಯರಾದ ಮಲ್ಲಣ್ಣ ಬಿರಾದಾರ, ಹಣಮೇಶ ತೋಳದಿನ್ನಿ, ಅರುಣ್ ದೊರೆ ಹುಣಸಗಿ, ಸುನಿಲ್ ಸೇರಿದಂತೆ ಇತರರು ಯೋಧ ದೇವಪ್ಪ ಅಬ್ಲಿಗೆ ಶುಭ ಹಾರೈಸಿ ಸನ್ಮಾನಿಸಿದರು.
ನಂತರ ಮಂಜಲಾಪುರ ಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರಮುಖರಾದ ಪ್ರಧಾನೆಪ್ಪ ಮೇಟಿ, ಮಲ್ಲಪ್ಪ ಮೇಟಿ, ಚಂದಪ್ಪ ಬೈಚಬಾಳ, ವೆಂಕಟೇಶ್ ಬಿರಾದಾರ, ಮಲ್ಲಪ್ಪ ಸಾಲವಾಡಗಿ ಸೇರಿದಂತೆ ಇತರರು ಸೇರಿ ಯುವಕನಿಗೆ ಸನ್ಮಾಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಪಟಾಕಿ ಸಿಡಿಸಿ ವಿಜೃಂಭಿಸಿದರು.
ಯೋಧ ದೇವಪ್ಪ ಅಬ್ಲಿ ತನ್ನ ಹೆತ್ತವರಿಗೆ ಪರೇಡ್ ಡ್ರಿಲ್ ಮೂಲಕ ಸೆಲ್ಯೂಟ್ ಮಾಡಿ ಟೋಪಿಯನ್ನು ಹಾಕುವುದರ ಜೊತೆಗೆ ಕೃತಜ್ಞತೆ ಸಲ್ಲಿಸಿದನು.
ವರದಿ : ಶಿವು ರಾಠೋಡ