ಲಿಂಗಸುಗೂರು ಪಟ್ಟಣದ ತಾಲ್ಲೂಕ ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕರಾದ ಮಾನಪ್ಪ ವಜ್ಜಲ್ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾಡಿದ ಟೀಕೆ ಅಸಂಗತವಾಗಿದೆ ಎಂದು ತಾಲ್ಲೂಕ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೆದಾರ ಸ್ಪಷ್ಟಪಡಿಸಿದರು.
ಅವರು ಮಾತನಾಡುತ್ತಾ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರು, ನಿರ್ಗತಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನೇರವಾಗಿ ಮನೆಮನೆಗೆ ತಲುಪುತ್ತಿದ್ದು, ಲಿಂಗಸುಗೂರು ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಜಾರಿಯಲ್ಲಿವೆ ಎಂದರು. “ಯೋಜನೆಗಳ ಕುರಿತು ಶಾಸಕರು ಟೀಕಿಸುವ ಮುನ್ನ ಆಲೋಚನೆ ಮಾಡಿ ಮಾತನಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಇಚ್ಚಾಶಕ್ತಿ ಕೊರತೆ ಇದೆ ಎಂಬುದು ತಾಲ್ಲೂಕಿನ ಜನರಿಗೆ ಗೊತ್ತಿರುವ ಸಂಗತಿ. ಟೀಕಿಸುವುದನ್ನು ಬಿಟ್ಟು ಸರ್ಕಾರದ ಬಳಿ ಅನುದಾನ ತರುವ ಪ್ರಯತ್ನ ಮಾಡಬೇಕು” ಎಂದು ಗುತ್ತೆದಾರರು ಹೇಳಿದರು.
ತಾಲ್ಲೂಕಿನಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳ ವಿವರ:
ಗೃಹಲಕ್ಷ್ಮಿ ಯೋಜನೆ (19-08-2023ರಿಂದ): ಒಟ್ಟು ನೊಂದಾಯಿತ ಫಲಾನುಭವಿಗಳು – 90,203; ಈಗಾಗಲೇ 84,275 ಕುಟುಂಬಗಳಿಗೆ ಹಣಕಾಸು ಸಹಾಯ ತಲುಪಿದೆ.
ಗೃಹಜ್ಯೋತಿ ಯೋಜನೆ (19-08-2023ರಿಂದ): ಉಚಿತ 200 ಯುನಿಟ್ ವಿದ್ಯುತ್ ಸೌಲಭ್ಯ; ತಾಲ್ಲೂಕಿನ 51,611 ಗ್ರಾಹಕರು ಪ್ರಯೋಜನ ಪಡೆದಿದ್ದಾರೆ.
ಯುವ ನಿಧಿ ಯೋಜನೆ (12-01-2024ರಿಂದ): ಜೂನ್ ವರೆಗೆ 2,123 ಯುವಕರಿಗೆ ಸಹಾಯ.
ಶಕ್ತಿ ಯೋಜನೆ (11-06-2023ರಿಂದ): 2023 ಜೂನ್ 11ರಿಂದ 2025 ಆಗಸ್ಟ್ 12ರವರೆಗೆ 195.15 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಸದುಪಯೋಗ ಪಡೆದಿದ್ದಾರೆ.
ಅನ್ನಭಾಗ್ಯ ಯೋಜನೆ (15-06-2023ರಿಂದ): ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕಿ.ಗ್ರಾಂ ಅಕ್ಕಿ ವಿತರಣೆ; ತಾಲ್ಲೂಕಿನ 3,35,935 ಸದಸ್ಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಸಯ್ಯದ್ ನ್ಯಾಮತುಲ್ಲಾ ಖಾದ್ರಿ, ಮಲ್ಲನಗೌಡ ಭೂಪೂರು, ಶಿವಕುಮಾರ್ ಪೂಜಾರಿ, ಗದ್ದೆನಗೌಡ ಪಾಟೀಲ್, ಆಸ್ಲಾಂ ಪಾಶಾ ಹಾಗೂ ಗೌಡಪ್ಪ ಗೋಲಪಲ್ಲಿ ಉಪಸ್ಥಿತರಿದ್ದರು.