ನಾರಾಯಣಪುರ: ಇಲ್ಲಿನ ಬಜಾರ ಗಣೇಶ ದೇವಸ್ಥಾನದ ಆವರಣದಲ್ಲಿ ಗಣೇಶ ಚತುರ್ಥಿ ದಿನವಾದ ಬುಧವಾರ ಗಣೇಶನ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಕರೆತಂದು ವಿಶೇಷ ಬಣ್ಣದ ವಿದ್ಯುದೀಪಗಳ ಅಲಂಕೃತ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿ ಭಕ್ತಿ ಮೆರದರು. ಪ್ರತಿಷ್ಠಾಪಿತ ಗಣೇಶನ ಮೂರ್ತಿಗೆ ಸಂಪ್ರದಾಯದAತೆ ಹೂ, ಮುತ್ತಿನ ಹಾರಗಳಿಂದ ಅಲಂಕಾರಗೈದು ವಿನಾಯಕನ ನೆಚ್ಚಿನ ಮೋದಕ, ಕಡಬು, ಹಣ್ಣುಗಳು ಸೇರಿದಂತೆ ತರಹೇವಾರಿ ತಿನಿಸುಗಳಿರುವ ನೈವಿದ್ಯ ಸಮರ್ಪಣೆಯೊಂದಿಗೆ ಆಯಾ ಗಜಾನನ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ಅರ್ಚಕರು ನಿತ್ಯವು ಬೆಳಿಗ್ಗೆ ಹಾಗೂ ಸಂಜೆ ವೇಳೆಗೆ ವಿಶೇಷ ಪೂಜೆ ನೆರವೇರಿಸಿದರು ಜೊತೆಗೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಣೆ ನಡೆಸಿದರು. 
ರಸಪ್ರಶ್ನೇ, ಚಿತ್ರಕಲಾ ಸ್ಪರ್ಧೆ: ಇಲ್ಲಿನ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಏಕದಂತ ಗಜಾನನ ಮಂಡಳಿಯವರು ಬುಧವಾರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರು, ಸಂಪ್ರದಾಯದಂತೆ ಶ್ರದ್ಧಾ ಭಕ್ತಿಯಿಂದ ಪೂಜೆಗೈದು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಳೆದ ೪ ದಶಕಗಳಿಂದಲೂ ವೈದ್ಯ ವೃತ್ತಿಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ|ಸುರೇಶ ಆದೋನಿ, ಡಾ|ಎಸ್.ಎಂ ಹವಳದ ಅವರಿಗೆ ಗಜಾನನ ಮಂಡಳಿಯವರು ವೈದ್ಯವಿಭೂಷಣಾ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು, ಬಳಿಕ ವಿದ್ಯಾರ್ಥಿಗಳಿಗೆ ರಸಪ್ರಶ್ನೇ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಿ ವಿಜೇತ ಚಿಣ್ಣರಿಗೆ ಯುವಕ ಮಂಡಳಿಯವರು ಬಹುಮಾನ ನೀಡಿದರು. ಯಮನಪ್ಪ ಜಂಜಿಗಡ್ಡಿ, ಲಕ್ಷ್ಮಣ ಕನ್ನೆಳ್ಳಿ, ಆಂಜನೇಯ ದೊರೆ, ರಮೇಶ ಕೋಳುರ, ಬಸಣ್ಣ ಕೆಂಡದ್, ಮಾರುತಿ, ಶೇಖರಯ್ಯ, ಮೋಹನ ಸೇರಿದಂತೆ ಗಜಾನನ ಮಂಡಳಿಯವರು, ಸ್ಥಳೀಯರು ಉಪಸ್ಥಿತರಿದ್ದರು.
