ಭಾನುವಾರ (ಜೂನ್ 29, 2025) ಮುಂಜಾನೆ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಒಡಿಶಾದ ಬೋಳಗಾರ್‌ನ ಬಸಂತಿ ಸಾಹು ಮತ್ತು ಪ್ರೇಮಕಾಂತ್ ಮೊಹಾಂತಿ ಹಾಗೂ ಬಲಿಪಟ್ಣದ ಪ್ರವತಿ ದಾಸ್ ಎಂದು ಗುರುತಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಜನರು ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ರಾತ್ರಿಯಿಡೀ ಜನರು ಜಮಾಯಿಸಿದ್ದರು. ಆದರೆ, ಪಹಾಡ ಆಚರಣೆ (ದೇವತೆಗಳ ವಿಶ್ರಾಂತಿ) ಕಾರಣ ರಾತ್ರಿ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮುಂಜಾನೆ ಮತ್ತೆ ದರ್ಶನ ಪ್ರಾರಂಭಗೊಂಡಾಗ ಪರಿಸ್ಥಿತಿ ಅಸ್ತವ್ಯಸ್ತವಾಯಿತು. ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು ಎಂದು ದಿ ಹಿಂದೂ ವರದಿ ಮಾಡಿದೆ.
“ಮೂವರು ಸಾವನ್ನಪ್ಪಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆರು ಮಂದಿ ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ” ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಭಾನುವಾರ ತಿಳಿಸಿದ್ದಾರೆ.
ರಾತ್ರಿಯಿಡೀ ಪೊಲೀಸ್ ಸಿಬ್ಬಂದಿಯ ಸಂಪೂರ್ಣ ಅನುಪಸ್ಥಿತಿಯೇ ದುರಂತಕ್ಕೆ ಕಾರಣ ಎಂದು ಮೃತರ ಸಂಬಂಧಿಕರು ಮತ್ತು ಹಲವಾರು ಭಕ್ತರು ಆರೋಪಿಸಿದ್ದಾರೆ. ಆದಾಗ್ಯೂ, ರಥಗಳ ಸುತ್ತಲೂ ಸಾಕಷ್ಟು ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಅಗರ್ವಾಲ್ ಸಮರ್ಥಿಸಿಕೊಂಡಿದ್ದಾರೆ.
ಒಡಿಶಾದ ಬಿಜೆಪಿ ಸರ್ಕಾರ ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಆಪ್ತರು ಮತ್ತು ಬೆಂಬಲಿಗರು ರಥಗಳು ಇರುವ ಜಾಗಕ್ಕೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದಾಗಿ ಮತ್ತಷ್ಟು ಅವ್ಯವಸ್ಥೆ ಉಂಟಾಗಿದೆ ಎಂದು ದಿ ಹಿಂದೂ ವರದಿ ಹೇಳಿದೆ.
ಘಟನೆ ಸಂಬಂಧ ಒಡಿಶಾದ ಪ್ರತಿಪಕ್ಷಗಳು ಮುಖ್ಯಮಂತ್ರಿ ಮೋಹನ್ ಮಾಝಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದೆ.
“ರಥಯಾತ್ರೆಯ ಸಮಯದಲ್ಲಿ ಜನಸಂದಣಿಯನ್ನು ನಿರ್ವಹಿಸುವಲ್ಲಿನ ವೈಫಲ್ಯದಿಂದ ನೂರಾರು ಜನರು ಗಾಯಗೊಂಡ ಒಂದು ದಿನದ ನಂತರ, ಇಂದು ಕಾಲ್ತುಳಿತ ಸಂಭವಿಸಿದೆ. ಇದು ರಥಯಾತ್ರೆಗೆ ಆಗಮಿಸಿದ ಜನರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡುವಲ್ಲಿ ಸರ್ಕಾರದ ಸ್ಪಷ್ಟ ಅಸಮರ್ಥತೆಯನ್ನು ಬಹಿರಂಗಪಡಿಸುತ್ತದೆ” ಎಂದು ಮಾಜಿ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭಕ್ತ ಚರಣ್ ದಾಸ್ ಕಾಲ್ತುಳಿತ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಈ ಘಟನೆಯ ಬಗ್ಗೆ ಕಾಲಮಿತಿಯೊಳಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯಪಾಲ ಹರಿ ಬಾಬು ಕಂಭಂಪತಿ ಮತ್ತು ಸಿಎಂ ಮೋಹನ್ ಮಾಝಿ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.