ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನೀಡುವ ರಾಜ್ಯಮಟ್ಟದ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಯನ್ನು
ರಿಪೋರ್ಟರ್ ಕರ್ನಾಟಕ ಪ್ರಧಾನ ಸಂಪಾದಕ ಅಶೋಕ್ ಕಲ್ಲಡ್ಕ ಅವರಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಅಶೋಕ್ ಕಲ್ಲಡ್ಕ ಅವರು ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಸ್ಟಿಸ್ ಹೆಗ್ಡೆ ಅವರು, ಹಿಂದಿನ ಕಾಲದಲ್ಲಿ ಯಾರಾದರು ಅಪರಾಧವೆಸಗಿ ಜೈಲು ಸೇರಿದರೆ, ಊರಿನವರು ಅಪರಾಧಿಯ ಮನೆಯತ್ತ ಸುಳಿಯುತ್ತಿರಲಿಲ್ಲ. ತಪ್ಪು ಮಾಡಿದವನಿಗೆ ಮಾತ್ರ ಶಿಕ್ಷೆಯಲ್ಲದೆ ಅವರ ಕುಟುಂಬಕ್ಕೂ ಶಿಕ್ಷೆಯಾಗುತ್ತಿತ್ತು. ಹಾಗಾಗಿ ಜನರು ಅಪರಾಧವೆಸಗಲು ಹೆದರುತ್ತಿದ್ದರು. ಆದರೆ ಇಂದು ಬೇಲ್ ಮೇಲೆ ಹೊರಬಂದ ಆರೋಪಿಯನ್ನು ನಾವು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮನುಷ್ಯನಿಗೆ ತೃಪ್ತಿ ಮತ್ತು ಮಾನವೀಯತೆ ಈ ಎರಡು ಮೌಲ್ಯಗಳು ಇರಬೇಕು. ತೃಪ್ತಿ ಎಂಬುವುದು ಇಲ್ಲದಿರುವುದೇ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ನಾವು ಎಷ್ಟು ಕೂಡ ದುಡ್ಡು ಮಾಡಬಹುದು. ಆದರೆ ಅದು ನ್ಯಾಯಸಮ್ಮತವಾಗಿರಬೇಕು. ಇನ್ನೊಬ್ಬರ ಜೇಬಿಗೆ ಕೈಹಾಕಬಾರದು ಎಂದರು.
ಚಿತ್ರನಟ ಚೇತನ್ ಅಹಿಂಸಾ, ಮಾಜಿ ಸಚಿವ ರಾಮಚಂದ್ರ ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.
ವರದಿಗಾರ : ಶಿವು ರಾಠೋಡ