ಹೊಸಪೇಟೆ, ಮೇ 21: ಯುಪಿಎ ಕಾಲದಲ್ಲಿ ಕೊಟ್ಟಿದ್ದ ಎಲ್.ಪಿ.ಜಿ. ಸಿಲಿಂಡರ್ ಗೆ ನೀಡುತ್ತಿದ್ದ ಸಬ್ಸಿಡಿಯನ್ನೂ ಕಸಿದುಕೊಂಡಿರುವ ಎನ್.ಡಿ.ಎ. ಸರ್ಕಾರ ಅಚ್ಛೇದಿನ್ ಎಂದು ಹೇಳುತ್ತಾ, ಬೂರಾ ದಿನ್ ತರುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ 2 ವರ್ಷ ತುಂಬಿದ ಸಂದರ್ಭದಲ್ಲಿ ಹೊಸಪೇಟೆಯಲ್ಲಿಂದು ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, 11 ವರ್ಷಗಳ ಹಿಂದೆ ಪೆಟ್ರೋಲ್, ಡೀಸೆಲ್ ದರವನ್ನು 30-40 ರೂಪಾಯಿ ಇಳಿಸುತ್ತೇವೆ. ಅಡುಗೆ ಅನಿಲ ದರ 200 ರೂ. ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್.ಡಿ.ಎ. ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿದೆ, ಕೆಲವೇ ಕೆಲವು ಉದ್ಯೋಗ ಪತಿಗಳ ಉದ್ಧಾರ ಮಾಡುತ್ತಿದೆ ಎಂದು ದೂರಿದರು.
ನುಡಿದಂತೆ ನಡೆದ ಸರ್ಕಾರ : ಕಕಗೆ 5 ಸಾವಿರ ಕೋಟಿ ರೂ.
ನಾವು ಚುನಾವಣೆಗೆ ಮುನ್ನ 5 ಗ್ಯಾರಂಟಿ ಘೋಷಿಸಿದ್ದೆವು. ಈ ಎಲ್ಲ ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದರ ಜೊತೆಗೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದೆವು. 42 ಕ್ಷೇತ್ರಗಳ ಅಭಿವೃದ್ಧಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಈಡೇರಿಸಿದ್ದಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ರಾಜ್ಯವೇನೂ ದಿವಾಳಿ ಆಗಿಲ್ಲ. ಬದಲಾಗಿ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಬಡವರಿಗೆ ಆರ್ಥಿಕ ಬಲ ಬಂದಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಒಡೆದಾಳುವ ನೀತಿ:
ರಾಹುಲ್ ಗಾಂಧೀ ಅವರು ಭಾರತ್ ಜೋಡೋ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಆದರೆ, ಬಿಜೆಪಿ ರಾಜ್ಯವನ್ನು, ದೇಶವನ್ನು ಕೋಮು, ಧರ್ಮದ ಹೆಸರಲ್ಲಿ ಒಡೆಯುವ ಕೆಲಸ ಮಾಡುತ್ತಿದೆ, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
2 ವರ್ಷದಲ್ಲಿ 8.5 ಕೋಟಿ ಸಸಿ ನೆಟ್ಟ ಸಾಧನೆ:
ಕಳೆದ 2 ವರ್ಷದಲ್ಲಿ ಭವಿಷ್ಯದ ಪೀಳಿಗೆಯ ಸುರಕ್ಷತೆಗಾಗಿ, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು 8.5 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ತಿಳಿಸಿದರು.