ಚಿತ್ತಾಪುರ: ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ, ರೌಡಿಶೀಟರ್ ಹೀಗೆ ಹಲವು ಪ್ರಕರಣಗಳಲ್ಲಿ ತೊಡಗಿರುವ ಕಾಂಗ್ರೆಸನ ಕೆಲವರು ಬಿಜೆಪಿ ನಾಯಕರ ಮೇಲೆ ದರ್ಪ ನಡೆಸಿರುವುದು ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿ ಅವರ ಕೈ ಬಲಪಡಿಸಲು ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶವನ್ನು ಹಾಳು ಮಾಡುವ ಕುತಂತ್ರ ಕಾಂಗ್ರೆಸ್ ಮುಖಂಡರಿಂದ ನಡೆದಿದೆ. ಆದರೆ, ಈ ತಿರಂಗಾ ಸಮಾವೇಶ ಸಂಪೂರ್ಣವಾಗಿ ಯಶಸ್ವಿಗೊಂಡಿದೆ. ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿರುವ ಕೆಲವು ಕಾಂಗ್ರೆಸ್ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿ ನೃತ್ಯ ಮಾಡುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ದಿಗ್ಬಂದನ ಹಾಕಿರುವುದು ತೀವ್ರ ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಮುಖಂಡರನ್ನು ಕೂಡಿ ಹಾಕಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆ ಅಣಕಿಸುವಂತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆಯ ಕಾವಲುಗಾರರಂತೆ ಕೆಲಸ ಮಾಡುತ್ತಿರುವ ಪೋಲಿಸ್ ಇಲಾಖೆ, ಬಂದೋಬಸ್ತ್ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಗುಂಡಗಳಿಗೆ ಪೊಲೀಸ್ ಅಧಿಕಾರಿಗಳು ಸಹಮತ ನೀಡಿರುವುದರಿಂದ ಈ ರೀತಿ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಿಂದ 20ರಿಂದ 30 ಪೊಲೀಸ್ ವಾಹನಗಳು ಬಂದೋಬಸ್ತ್ ಕಲ್ಪಿಸಲು ಚಿತ್ತಾಪುರ ಪಟ್ಟಣಕ್ಕೆ ಬಂದಿದ್ದವು. ಆದರೂ, ಸಹ ದಿಗ್ಬಂಧನಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಎದೆಗುಂದಿಲ್ಲ. ತಾಲೂಕಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ ಮಾತನಾಡಿ, ದಲಿತರನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಸುವ ಮನಸ್ಥಿತಿ ಖರ್ಗೆ ಕುಟುಂಬದಲ್ಲಿ ಕಾಣುವುದಿಲ್ಲ. ಗುರುಮಠಕಲ್ ಮತಕ್ಷೇತ್ರದಲ್ಲಿ ಯಾವ ರೀತಿ ವಾತಾವರಣ ಸೃಷ್ಟಿಯಾಗಿತ್ತು ಅದೇ ರೀತಿ ವಾತಾವರಣ ಚಿತ್ತಾಪುರದಲ್ಲಿ ಸೃಷ್ಟಿಯಾಗಿದೆ. ಖರ್ಗೆ ಕುಟುಂಬದ ವಿರುದ್ಧ ಮಾತನಾಡುವವರನ್ನು ಮುಗಿಸುವ ಹುನ್ನಾರ ನಡೆಸುತ್ತದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಿಯಾಂಕ ಖರ್ಗೆ ಅವರು ಗುಂಡಾ ಪ್ರವೃತ್ತಿ ಚಿತ್ತಾಪುರ ತಾಲ್ಲೂಕಿನಲ್ಲಿ ತರುತ್ತಿದ್ದಾರೆ. ಚಿತ್ತಾಪುರ ಮತಕ್ಷೇತ್ರದ ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಇದ್ದೇವೆ. ಪ್ರಿಯಾಂಕ್ ಖರ್ಗೆ ಅವರು ಅನೇಕ ಬಾರಿ ಬಿಜೆಪಿ ನಾಯಕರ ಬಗ್ಗೆ ಮಾತನಾಡಿದ್ದಾರೆ ಆದರೆ ನಾವು ಅವರ ಮಾತಿಗೆ ಕೌಂಟರ್ ಕೊಟ್ಟಿದ್ದೇವೆ ಹೊರತು ಗುಂಡ ವರ್ತನೆ ಮಾಡಿಲ್ಲ ನಿಜವಾದ ಪ್ರಜಾಪ್ರಭುತ್ವ ಎಲ್ಲಿ ಕಾಣುತ್ತೇವೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ, ಪ್ರಜಾಪ್ರಭುತ್ವ ಹಾಳು ಮಾಡುವುದು ಕಾಂಗ್ರೆಸ್ ನಲ್ಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಮುಖಂಡ ಅಂಬರ ಅಷ್ಟಗಿ ಅವರ ಮೇಲೆ ಕಾಂಗ್ರೆಸ್ನ ಗುಂಡಗಳು ಹಲ್ಲೆ ಮಾಡಿರುವುದು ತೀವ್ರವಾಗಿ ಖಂಡಿಸುತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಚಂದ್ರಶೇಖರ ಅವಂಟಿ ಮಾತನಾಡಿದರು.
ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಸದಸ್ಯ ರಮೇಶ ಬೊಮ್ಮನಹಳ್ಳಿ, ಕಾರ್ಯದರ್ಶಿಗಳಾದ ನಾಗರಾಜ ಹೂಗಾರ್,ಮಲ್ಲಿಕಾರ್ಜುನ ಇಟಗಿ, ವಕ್ತಾರ ಶಿವರಾಮ ಚವ್ಹಾಣ, ಸುರೇಶ ಬೆನಕನಹಳ್ಳಿ, ರಮೇಶ ಕಾಳಗಿ, ಸುದ್ದಿಗೋಷ್ಠಿಯಲ್ಲಿ ಇದ್ದರು.