ಬೆಂಗಳೂರು: 2025-26ರ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣ ಸೇರಿದಂತೆ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಗ್ರಾಮ ಪಂಚಾಯತಿ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕಛೇರಿ ಆವರಣಗಳಲ್ಲಿ ʻಅಕ್ಕ ಕೆಫೆ ಮತ್ತು ಕ್ಯಾಂಟೀನ್ʼ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಇನ್ನು ಮಹಿಳಾ ಸಬಲೀಕರಣಕ್ಕೆ ಪ್ರತಿ ತಾಲೂಕಿನಲ್ಲಿ ಒಂದು ʻಸಮಗ್ರ ಕೃಷಿ ಕ್ಲಸ್ಟರ್ʼ ಅಭಿವೃದ್ಧಿಪಡಿಸಲಾಗುವುದು. ಶಾಲೆ, ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಮೊಟ್ಟೆ ಮತ್ತು ತರಕಾರಿ ಪೂರೈಸಲು ಸ್ವ-ಸಹಾಯ ಸಂಘಗಳ ʻಕಿರು ಉದ್ಯಮʼಗಳನ್ನು ಪ್ರೋತ್ಸಾಹಿಸಲಾಗುವುದು. ಸ್ವ-ಸಹಾಯ ಸಂಘಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ʻಸಮುದಾಯ ಪ್ರವಾಸಿ ಯೋಜನೆʼಯನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಅಡಿ ಸರ್ಕಾರವು ʻಯುವನಿಧಿʼ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈಗಾಗಲೇ ಸುಮಾರು 2.58 ಲಕ್ಷ ಯುವಕರು ನೋಂದಾಯಿಸಿಕೊಂಡಿದ್ದಾರೆ. ಅವರಿಗೆ 286 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇತರೆ ವಿದೇಶೀ ಭಾಷಾ ಕೌಶಲ್ಯ ತರಬೇತಿ ನೀಡಲಾಗುವುದು. ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ಒದಗಿಸಲು ʻನನ್ನ ವೃತ್ತಿ, ನನ್ನ ಆಯ್ಕೆʼ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದಿದ್ದಾರೆ.
ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಭಾಷಾ ತರಬೇತಿ ನೀಡಲು 20 ಕೋಟಿ ರೂ. ವೆಚ್ಚದಲ್ಲಿ 36 ಜರ್ಮನ್ ಭಾಷಾ ಪ್ರಯೋಗಾಲಯಗಳನ್ನು ನಿರ್ಮಿಸಲಾಗುವುದು. ಜರ್ಮನ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ 5,000 ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಡಿಪ್ಲೋಮ ಕೋರ್ಸ್‌ನ ಭಾಗವಾಗಿ ಒಂದು ವರ್ಷದ ತರಬೇತಿಯನ್ನು ಜರ್ಮನಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಜಿಟಿಟಿಸಿ, ಜರ್ಮನ್ ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳ ಸಹಯೋಗದೊಂದಿಗೆ ಜರ್ಮನಿಯ ಡ್ಯುಯಲ್ ಎಜುಕೇಷನ್ ಮಾದರಿಯಲ್ಲಿ ಬಿ.ಇ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.