15 ನೇ ಶತಮಾನದಲ್ಲಿ ನಿರ್ಮಿಸಿದ ಒಂದು ಅಭೇದ್ಯ ಕೋಟೆ. ಮುಂಬೈನಿಂದ ದಕ್ಷಿಣಕ್ಕೆ 165 ಕಿ.ಮೀ ದೂರದಲ್ಲಿರುವ ಮುರುದ್ ಬಂದರು ಪಟ್ಟಣದ ಬಳಿ ಅಂಡಾಕಾರದ ಬಂಡೆಯ ಮೇಲೆ ನೆಲೆಗೊಂಡಿರುವ ಜಂಜೀರಾ ಭಾರತದ ಅತ್ಯಂತ ಬಲಿಷ್ಠ ಸಮುದ್ರ ಕೋಟೆಗಳಲ್ಲಿ ಒಂದಾಗಿದೆ. ರಾಜಪುರಿ ದ್ವಾರದಿಂದ ಹಾಯಿ ದೋಣಿಗಳು ಜಂಜೀರಾ ಕೋಟೆಗಳನ್ನು ತಲುಪಿಸುತ್ತವೆ. ದೂರದಿಂದ ಹೋಗುವಾಗ ಕೋಟೆ ಕಾಣಿಸುವದಿಲ್ಲ, ಕೋಟೆಯ ಸಮೀಪ ಹೋದಾಗ ಮಾತ್ರ ಕಾಣಿಸುತ್ತದೆ. ಕೋಟೆಯು 19 ದುಂಡಾದ ಕೊತ್ತಲಗಳನ್ನು ಹೊಂದಿದೆ. ಈಗ ಶಿಥಿಲಗೊಂಡಿರುವ ಈ ಕೋಟೆಯು ತನ್ನ ಉತ್ತುಂಗದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿತ್ತು.
ಕೋಟೆಯ ಒಳಗೆ ಅರಮನೆಗಳು, ಅಧಿಕಾರಿಗಳಿಗೆ ವಸತಿ ಗೃಹಗಳು, ಮಸೀದಿ, ದೊಡ್ಡ ಸಿಹಿನೀರಿನ ಟ್ಯಾಂಕ್ ಕೊಳ ಇತ್ಯಾದಿ. ಮುಖ್ಯ ದ್ವಾರದ ಪಕ್ಕದಲ್ಲಿರುವ ಹೊರ ಗೋಡೆಯ ಮೇಲೆ ಹುಲಿಯಂತಹ ಪ್ರಾಣಿಯು ತನ್ನ ಉಗುರುಗಳಲ್ಲಿ ಆನೆಗಳನ್ನು ಹಿಡಿದಿರುವುದನ್ನು ಚಿತ್ರಿಸುವ ಶಿಲ್ಪವಿದೆ. ಈ ಕೆತ್ತನೆ ಮಹಾರಾಷ್ಟ್ರದ ಅನೇಕ ಕೋಟೆ ದ್ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಪೋರ್ಚುಗೀಸರು, ಬ್ರಿಟಿಷರು ಮತ್ತು ಮರಾಠರು ಈ ಕೋಟೆ ಸಾಕಷ್ಟು ಸಲ ದಾಳಿ ಮಾಡಿದರು ಅದರಲ್ಲಿ ವಿಫಲರಾದರು. ಜಂಜೀರಾ ಕೋಟೆಯನ್ನು ವಶಪಡಿಸಿಕೊಳ್ಳಲು ಶಿವಾಜಿ ಮಾಡಿದ ಎಲ್ಲಾ ಪ್ರಯತ್ನಗಳು ಒಂದಲ್ಲ ಒಂದು ಕಾರಣಕ್ಕಾಗಿ ವಿಫಲವಾದವು. ಸಂಭಾಜಿ ಪ್ರಯತ್ನ ಕೂಡ ವಿಫಲವಾದಾಗ ಅವರು ಜಂಜೀರಾದಿಂದ ಕೇವಲ 9 ಕಿ.ಮೀ ಉತ್ತರಕ್ಕೆ ಪದ್ಮದುರ್ಗ (ಕನ್ಸಾ) ಎಂದು ಕರೆಯಲ್ಪಡುವ ಮತ್ತೊಂದು ದ್ವೀಪದಲ್ಲಿ ಕೋಟೆಯನ್ನು ನಿರ್ಮಿಸಿದರು.
ಹೀಗೆ ಪ್ರತಿಯೊಂದು ಪ್ರದೇಶ, ಪ್ರತಿಯೊಂದು ವ್ಯಕ್ತಿ, ಪ್ರತಿಯೊಂದು ವಸ್ತುಗಳ ಹಿಂದೆ ಒಂದೊಂದು ಕಥೆ ಇರುತ್ತದೆ.