ಚಿತ್ತಾಪುರ: ತಾಲೂಕಿನ ಯರಗಲ್ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಬ್ಯಾನರ್ ಹರಿದು, ವಿಠಲ್ ಹೇರೂರು ಚಿತ್ರ ವಿರೂಪಗೊಳಿಸಿ ಸುಟ್ಟು ಅವಮಾನಿಸಿದ ಕಿಡಿಗೇಡಿಗಳನ್ನು 24 ಘಂಟೆಯಲ್ಲಿ ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕು ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಅವರು ಆಗ್ರಹಿಸಿದ್ದಾರೆ.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಶರಣರಲ್ಲಿಯೇ ನಿಜಶರಣ ಎಂದು ಕರೆಯಿಸಿಕೊಂಡ ಸಮಾಜ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಹಾಗೂ ಕೋಲಿ ಸಮಾಜದ ಸ್ವಾಭಿಮಾನ ಸಿಂಹ ಎಂದು ಕರೆಯಿಸಿಕೊಂಡ ಹುಟ್ಟು ಹೋರಾಟಗಾರರಾಗಿದ್ದ ದಿ.ವಿಠಲ್ ಹೇರೂರು ಹಾಗೂ ಮಾತಾ ಮಾಣಿಕೇಶ್ವರಿ ಅವರು ಇರುವ ಬ್ಯಾನರ್ ಬುಧವಾರ ರಾತ್ರಿ ಹರಿದು ಅವಮಾನ ಮಾಡಿರುವ ಘಟನೆ ಅಕ್ಷಮ್ಯ ಅಪರಾಧವಾಗಿದೆ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಹೇಳಿದರು.
ಅಂಬಿಗರ ಚೌಡಯ್ಯ ಇರುವ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಈ ನಿಟ್ಟಿನಲ್ಲಿ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟೀಕಾರ ಮಾತನಾಡಿ, ಅಂಬಿಗರ ಚೌಡಯ್ಯ, ಮಾತಾ ಮಾಣಿಕೇಶ್ವರಿ ಹಾಗೂ ವಿಠಲ್ ಹೇರೂರು ಅವರು ಇರುವ ಬ್ಯಾನರ್ ಹರಿದು,ದಿ.ವಿಠಲ್ ಹೇರೂರು ಅವರ ಚಿತ್ರ ವಿರೂಪಗೊಳಿಸಿ ಗ್ರಾಮದ ಶಾಂತಿಯನ್ನು ಕದಡಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಇಲ್ಲದಿದ್ದರೆ ಕೋಲಿ ಸಮಾಜದ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಗು ನಾಟೀಕಾರ ಮಾತನಾಡಿದರು. ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ, ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ತಮ್ಮಣ್ಣ ಡಿಗ್ಗಿ, ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ, ದಶರಥ ದೊಡ್ಡಮನಿ, ಆನಂದ ಯರಗಲ್, ಸಾಬಣ್ಣ ನಾಲವಾರ, ಶರಣು ಅರಣಕಲ್, ಅಂಬು ಹೊಳಿಕಟ್ಟಿ, ತಿಪ್ಪಣ್ಣ ಇವಣಿ, ರವಿ ದೊಡ್ಡಮನಿ ಸೇರಿದಂತೆ ಇತರರು ಇದ್ದರು.