ಕರ್ನಾಟಕದಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ವಿಚಾರವಾಗಿ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಮಾತನಾಡಿದ್ದಾರೆ. ವಿಧಾನಸಭೆಯಲ್ಲಿ ಸಭಾಪತಿ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಜನ ಶಾಸಕರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶ ಮಾಡಿದ್ದರು.
ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರವಾಗಿ ಯು.ಟಿ ಖಾದರ್ ಅವರು ಅಮಾನತು ಹಿಂಪಡೆಯುವ ಬಗ್ಗೆ ಸುಳಿವು ನೀಡಿದ್ದಾರೆ.
ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ಅವರ ತಪ್ಪನ್ನು ತಿಳಿದುಕೊಂಡು ಮನವಿ ಮಾಡಲಿ. ಆಗ ಬಿಜೆಪಿಯ 18 ಜನ ಶಾಸಕರ ಆರು ತಿಂಗಳ ಅಮಾನತು ಅವಧಿಯನ್ನು ಕಡಿಮೆ ಮಾಡುತ್ತೇನೆ ಎಂದು ಖಾದರ್ ಅವರು ಹೇಳಿದ್ದಾರೆ. ಬಿಜೆಪಿಯ ಶಾಸಕರು ಕಾಗದಗಳನ್ನು ಹರಿದು ನನ್ನ ಮೇಲೆ ಎಸೆಯುವ ಮೂಲಕ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ನನ್ನ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಖಾದರ್ ಅವರು ಹೇಳಿದ್ದಾರೆ.
ಮುಂದೆ ಯಾರೂ ವಿಧಾನಸಭೆಯಲ್ಲಿ ಈ ರೀತಿ ಮಾಡಬಾರದು ಎನ್ನುವ ಎಚ್ಚರಿಕೆಯ ಸಂದೇಶವನ್ನು ಕೊಡಲು ಈ ಕ್ರಮ ಸರಿ ಇದೆ ಎಂದು ಯುಟಿ ಖಾದರ್ ಅವರು ಬಿಜೆಪಿ ನಾಯಕರ ಅಮಾನತು ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಸದಸ್ಯರು ಮುಂದೆ ಈ ರೀತಿಯ ವರ್ತಿಸಬಾರದು ಎನ್ನುವುದಕ್ಕೆ ಇದೊಂದು ಎಚ್ಚರಿಕೆ ಗಂಟೆ ಎಂದಿದ್ದಾರೆ.
ಜನಪ್ರತಿನಿಧಿಗಳು ಜನರಿಂದ ಆಯ್ಕೆ ಆಗಿರುತ್ತಾರೆ ಎನ್ನುವುದು ಗೊತ್ತಿದೆ. ಅದಕ್ಕೆ ಗೌರವ ನೀಡಿ ಶಾಸಕರು ನಡೆದುಕೊಳ್ಳಬೇಕಲ್ಲವೇ ಎಂದು ಯು.ಟಿ ಖಾದರ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರು ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ರೀತಿ ಮಾಡಿದ್ದರು. ಸಚಿವರ ಹನಿಟ್ರ್ಯಾಪ್ ವಿಷಯವಾಗಿ ಸದನದಲ್ಲಿ ಸೃಷ್ಟಿಯಾಗಿದ್ದ ಗದ್ದಲದ ವಾತಾವರಣದಲ್ಲಿ ಸ್ಪೀಕರ್ ಆದೇಶವನ್ನು ಸಹ ಗಣನೆಗೆ ತೆಗೆದುಕೊಳ್ಳದೆ. ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಅಶಿಸ್ತು ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ಈ ರೀತಿ ಆರು ತಿಂಗಳ ಅವಧಿಗೆ ಅಮಾನತು ಮಾಡಿರುವುದಾಗಿ ಅವರು ಹೇಳಿದ್ದಾರೆ.
ಬಿಜೆಪಿಯ ಶಾಸಕರು ಕುರ್ಚಿಯ ಮೇಲೆ ಹತ್ತಿ ನಿಂತುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಶಿಸ್ತಿನ ವರ್ತನೆ ಹಾಗೂ ಸ್ಪೀಕರ್ ಕುರ್ಚಿಗೆ ಅಗೌರವವಾಗಿ ನಡೆದುಕೊಂಡಿದ್ದರಿಂದ ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿದೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ ಅನುಸಾರ ನಿಯಮ 348ರ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಯಾವ ಒತ್ತಡದ ಪ್ರಶ್ನೆಯೂ ಇಲ್ಲ: ಈ ವಿಚಾರದಲ್ಲಿ ಯಾವ ಒತ್ತಡದ ಪ್ರಶ್ನೆಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಯು.ಟಿ ಖಾದರ್ ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಇದೀಗ ಈ ವಿಚಾರವಾಗಿ ಮಾತನಾಡಿರುವ ಖಾದರ್ ಅವರು, ಶಾಸಕರ ಮೇಲಿನ ಕೋಪವಾಗಲಿ ಇಲ್ಲವೇ ದ್ವೇಷದ ಕಾರಣಕ್ಕೆ ಅವರನ್ನು ಅಮಾನತು ಮಾಡಿಲ್ಲ. ಬಿಜೆಪಿಯ 18 ಶಾಸಕರು ಮನವಿ ಮಾಡಿದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುಬಹುದು ಎಂದಿದ್ದಾರೆ. ಈ ಮೂಲಕ 18 ಜನ ಬಿಜೆಪಿ ಶಾಸಕರ ಅಮಾತನು ಆದೇಶವನ್ನು ಹಿಂಪಡೆಯುವ ಬಗ್ಗೆ ಸುಳಿವು ನೀಡಿದ್ದಾರೆ.