ಲಿಂಗಸುಗೂರಿನ ಕಂದಾಯ ಇಲಾಖೆಯ ಸುತ್ತ ಕೋಟಿ ಕೋಟಿ ಹಗರಣದ ಹುತ್ತ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಮುಂಚಿತವಾಗಿಯೇ ತಹಶೀಲ್ದಾರ ಶಂಶಾಲಂ ರವರು ಎಸ್‌ಡಿಎ ಯಲ್ಲಪ್ಪ ರವರನ್ನು ತನ್ನ ಚೇಂಬರ್‌ಗೆ ಕರೆಯಿಸಿ ಒತ್ತಾ ಯ ಪೂರ್ವಕವಾಗಿ ಅವರಿಂದ ತಪ್ಪು ಒಪ್ಪಿಗೆ ಪತ್ರವನ್ನು ಬರೆಯಿಸಿಕೊಂಡು ತದನಂತರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆಂಬ ಗುಮಾನಿಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ.
ತಹಶೀಲ್ದಾರ ಶಂಶಾಲಂರವರು ತಮ್ಮ ಎಲ್ಲ ಕಾರ್ಯ ಚಟುವಟಿ ಕೆಗಳನ್ನು ಸಿಬ್ಬಂದಿ ಯಲ್ಲಪ್ಪನ ನೇತೃತ್ವ ಹಾಗೂ ಮುಂದಾಳತ್ವದಲ್ಲಿಯೇ ಮಾಡಿಸುತ್ತಿದ್ದರು. ತಹಶೀಲ್ದಾರರಿಗೆ ಯಲ್ಲಪ್ಪ ಬಲಗೈ ಭಂಟನೆಂದರೆ ತಪ್ಪಾಗಲಾರದು. ಕಂದಾಯ ಇಲಾಖೆಯ ವಿವಿಧ ಪ್ರಮಾಣ ಪತ್ರಗಳಿಗೆ ಒಂದೊಂದು ದರ ನಿಗದಿ ಮಾಡಿದ್ದರು. ಹಣ ನೀಡಿದರೆ ಕ್ಷಣಾರ್ಧದಲ್ಲಿಯೇ ಪ್ರಮಾಣ ಪತ್ರಗಳು ಫಲಾನುಭವಿಗಳ ಕೈಸೇರುತ್ತಿದ್ದವು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಶಂಶಾಲಂ ರವರು ತಹಶೀಲ್ದಾರ ಆಗುವುದಕ್ಕೆ ಮುಂಚೆ ವಕೀಲ
ವೃತಿಯನ್ನು ಮಾಡುತ್ತಿದ್ದರು. ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ನೌಕರಿಯನ್ನು ಪಡೆದರು ಎಂಬ ಮಾಹಿತಿ ಲಭ್ಯವಾಗಿದೆ.
ವಕೀಲ ವೃತ್ತಿಯಲ್ಲಿ ಪಳಗಿರುವ ತಹಶೀಲ್ದಾರರು ಪ್ರಕರಣ ಗಳನ್ನು ತಿರುಚುವ ಕಲೆ ಕರಗತ ಮಾಡಿಕೊಂಡಿದ್ದರು. ಇದರಿಂದಾಗಿ ಈ ಕೋಟಿ ಕೋಟಿ ಹಗರಣದಲ್ಲಿ ನಾಜುಕಾಗಿ ಅವ್ಯವಹಾರ ನಡೆಸಿದ್ದು, ಸಿಬ್ಬಂದಿ ಯಲ್ಲಪ್ಪನ ಮುಖಾಂತರ ಅವ್ಯವಹಾರ ನಡೆಸಿದ್ದು, ಈ ಹಗರಣದಲ್ಲಿ ತಹಶೀಲ್ದಾರ ಕಚೇರಿಯ 2-3 ಸಿಬ್ಬಂದಿಗಳು ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
1.87 ಕೋಟಿಯ ಅವ್ಯವಹಾರ ನಡೆಸಿದ್ದು, ಈ ಹಣದ ಪಾಲುಗಾರಿಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಈ ಹಗರಣ ಬೆಳಕಿಗೆ ಬಂದಿದೆ. ಪಾಲುಗಾರಿಕೆ ಸರಿ ಹೊಂದಿದ್ದರೆ ಈ ಹಗರಣ ಬೆಳಕಿಗೆ ಬರುತ್ತಿರಲಿಲ್ಲ ಎಂಬ ಸುಳಿವು ದೊರಕಿದೆ.
ಈ ಹಿಂದೆ ಇಂತಹ ಎಷ್ಟು ಹಗರಣಗಳು ನಡೆದಿವೆಯೋ ತಿಳಿಯದು, ಆದರೆ ಒಬ್ಬ ವ್ಯಕ್ತಿಯಿಂದ ಭಾರಿ ಅವ್ಯವಹಾರ ನಡೆದಿರುವುದಕ್ಕೆ ಸಾಧ್ಯವೇ ಇಲ್ಲ. ತಹಶೀಲ್ದಾರ ಹಾಗೂ ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ಇದೆ. ಈ ಹಗರಣದಲ್ಲಿ ಯಲ್ಲಪ್ಪನನ್ನು ಬಲಿಪಶು ಮಾಡಲಾಗಿದೆ. ನಾಮಕಾವಸ್ತೆ ತನಿಖೆ ಮಾಡಿದರೆ ಸಾಲದು, ಉನ್ನತ ಮಟ್ಟದ ತನಿಖೆಯಿಂದ ಮಾತ್ರ ಈ ಕೋಟಿ ಹಗರಣದಲ್ಲಿರುವ ಕಾಣದ ಕೈಗಳನ್ನು ಕಂಡು ಹಿಡಿಯಲು ಸಾಧ್ಯ.
ಕೋಟಿ ಹಗರಣವನ್ನು ಮುಚ್ಚಿ ಹಾಕುವ ತಂತ್ರ ಕುತಂತ್ರಗಳು ನಡೆಯುತ್ತಿವೆ. ಕಾರಣ ಉನ್ನತ ಮಟ್ಟದ ತನಿಖೆಯಿಂದ ಮಾತ್ರ ಈ ಹಗರಣ ವನ್ನು ಭೇದಿಸಿ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರ ಹಣ ಮರಳಿ ಪಡೆಯಲು ಸಾಧ್ಯ ಹಾಗೂ ಮತ್ತೊಮ್ಮೆ ಇಂತಹ ಪ್ರಕರಣಗಳು ನಡೆಯದಿರಲು ಈ ಪ್ರಕರಣ ಪಾಠವಾಗಲಿದೆ
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ