ಸುರಪುರ : ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಸೋಮವಾರ ಮುಂಜಾನೆ ದಿಢೀರ್ ಭೇಟಿ ನೀಡಿದರು.
ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳ ಕುರಿತು ವಾರ್ಡ್‌ನ್ ಅವರಿಂದ ಮಾಹಿತಿ ಪಡೆದ ಅವರು, ಉಗ್ರಾಣಕ್ಕೆ ಹೋಗಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಹಾಸ್ಟೆಲ್ ಆವರಣ, ಕೊಠಡಿಗಳು, ಶೌಚಾಲಯ ಹಾಗೂ ಅಡುಗೆ ಕೋಣೆಗಳ ಸ್ವಚ್ಛತೆಯನ್ನು ವೀಕ್ಷಿಸಿದರು.
ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ
ವಾರ್ಡ್‌ನ್ ನಮ್ಮನ್ನು ಗದರಿಸುತ್ತಾರೆ. ಬೆದರಿಕೆಯಿಂದ ನಮ್ಮನ್ನು ಇಟ್ಟಿದ್ದಾರೆ. ಹಾಲಿಗೆ ಹೆಚ್ಚು ನೀರು ಬೆರೆಸಿಕೊಡುತ್ತಾರೆ. ನೋಡಿ ಸರ್ ಎಂದು ವಿದ್ಯಾರ್ಥಿಗಳು ಹಾಲಿನ ಲೋಟ ತಂದು ತೋರಿಸಿದ್ದರು. ಹಾಗೆಯೇ ಮಧ್ಯಾಹ್ನದ ಚಪಾತಿಯನ್ನು ರಾತ್ರಿ ಕೊಡುತ್ತಾರೆ. ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ ಎಂದು ಸೇರಿದಂತೆ ಹಲವು ಸಮಸ್ಯೆಗಳನ್ನು ಅಲವತ್ತುಕೊಂಡರು.