ಛಾವಣಿ (ಲಿಂಗಸ್ಗೂರ) : ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಟಿಯುಸಿಐ ಮುಖಂಡ ಆರ್.ಮಾನಸಯ್ಯ ವಿರುದ್ಧ ಭೂಗಳ್ಳತನ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ಆದೇಶ ಹಟ್ಟಿ ಅವರಿಗೆ ಮನವಿ ಸಲ್ಲಿಸಿ,'ಮಾನಸಯ್ಯ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕಿತ್ತು. ದಾಖಲಿಸಿ ಕೊಂಡಿಲ್ಲ. ಗೃಹ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.
'ರಾಷ್ಟ್ರಾಭಿಮಾನ, ಹಿಂದುತ್ವದ ರಕ್ಷಣೆ, ವಕ್ಫ್ ಕಾಯ್ದೆಯಿಂದ ರೈತರು ಅನುಭವಿಸುತ್ತಿರುವ ನೋವು, ಸರ್ಕಾರದ ಜಮೀನು ಕಬಳಿಕೆಯಂಥ ವಿಷಯಗಳ ಕುರಿತು ಹೇಳಿಕೆ ನೀಡಿರುವ ಪ್ರಮೋದ್ ಮುತಾಲಿಕ್ ಬಗ್ಗೆ ಹೇಳಿಕೆ ನೀಡಿರುವ ಹಾಗೂ ಅರಣ್ಯ ಮತ್ತು ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ರಘುಗೌಡ ನಾಯಕ, ಮುಖಂಡರಾದ ಹನುಮಂತ ಅಂಬಿಗೇರ, ರಾಜುರಡ್ಡಿ, ಅಂಬರೀಶ ಛತ್ರಪತಿ, ಕಾಳು ನಾಯಕ, ಮೌನೇಶ ನಾಯಕ, ಬಿ.ಕೆ.ನಾಯಕ, ಶಂಭುಲಿಂಗ ಪಾಟೀಲ ನೇತೃತ್ವ ವಹಿಸಿದ್ದರು
ಜಿಲ್ಲಾ ವರದಿಗಾರರು : ಶಿವು ರಾಠೋಡ