ಲಿಂಗಸುಗೂರು ಕ್ಷೇತ್ರಕ್ಕೆ ಯಾರಾಗ್ತಾರೆ ಅಧಿಪತಿ? ತ್ರಿಪಕ್ಷಗಳಿಗೂ ಸಮಾನ ಅವಕಾಶ !

Udayavani News
0

ಲಿಂಗಸುಗೂರ ವರದಿ. ಗೌತಮ ಕುಮಾರ.

ಲಿಂಗಸುಗೂರು ವಿಧಾನಸಭಾ ಕ್ಷೇತ್ರ ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು, 2008ರ ಕ್ಷೇತ್ರ ಪುನರ್‌ವಿಂಗಡಣೆಯ ಸಮಯದಿಂದ ಪರಿಶಿಷ್ಟ ಜಾತಿಗೆ ಕ್ಷೇತ್ರ ಮೀಸಲಾಗಿದೆ. ಒಂದು ಕಾಲದಲ್ಲಿ ಲಿಂಗಸುಗೂರು ರಾಜಕಾರಣಿಗಳ ತವರು ಎನ್ನುತ್ತಿದ್ದರು ಈಗ ಇಲ್ಲಿಗೆ ಬೇರೆ ಜಿಲ್ಲೆಯವರು ಬಂದು ರಾಜಕಾರಣ ಮಾಡುತ್ತಿದ್ದಾರೆ. ಬ್ರಿಟಿಷರ ಆಡಳಿತದಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವಾಗಿ ಪ್ರಸಿದ್ಧಿಯಾಗಿತ್ತು.
ನಾನಾ ರಾಜಕೀಯ ಪಕ್ಷಗಳಿಂದ ಗೆದ್ದವರಲ್ಲಿ ಈ ಕ್ಷೇತ್ರದವರು ಸಿಂಹಪಾಲು ಎಂಬುದು ವಿಶೇಷ. ಇಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಫೈಟ್‌ ಇದೆ. ಆದರೆ ಜರ್ನಾರ್ದನ ರೆಡ್ಡಿಯ  ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ಅಭ್ಯರ್ಥಿ ಆರ್.ರುದ್ರಯ್ಯನವರು  ಗೆಲ್ಲುವ ಅಭ್ಯರ್ಥಿಗೆ  ಸೋಲಿನ ರುಚಿಯನ್ನು ಉಣ ಬಡಿಸುತ್ತಾರೆ ಎಂದು  ಕ್ಷೇತ್ರದ   ರಾಜಕೀಯ ವಿಶ್ಲೇಷಕರ  ಮಾತನಾಡುತ್ತಿದ್ದಾರೆ.  
  ಕ್ಷೇತ್ರದ ರಾಜಕೀಯ ಹಿನ್ನೆಲೆ!
ಇಲ್ಲಿಯವರೆಗೂ ಲಿಂಗಸುಗೂರು ಕ್ಷೇತ್ರ 15 ಚುನಾವಣೆಗಳನ್ನು ಕಂಡಿದ್ದು, 8 ಬಾರಿ ಕಾಂಗ್ರೆಸ್‌ ಗೆದ್ದಿದೆ. ಒಂದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಜನತಾ ದಳ (ಸಂಯುಕ್ತ ಮತ್ತು ಜಾತ್ಯಾತೀತ) 4 ಬಾರಿ ಗೆಲುವು ಕಂಡಿದ್ದು, ಒಂದು ಬಾರಿ ಜೆಎನ್‌ಪಿ ಗೆದ್ದಿದೆ. ಸದ್ಯ ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಾಗಿರುವ ಅಮರೇಗೌಡ ಪಾಟೀಲ್‌ ಬಯ್ಯಾಪೂರ ಇದೇ ಕ್ಷೇತ್ರದಿಂದ 1994, 1999, 2004ರಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್‌ವಿಂಗಡಣೆಯಾಗಿ ಲಿಂಗಸುಗೂರು ಎಸ್‌ಸಿ ಮೀಸಲು ಕ್ಷೇತ್ರ ಆದ ಮೇಲೆ ಅವರು ಕುಷ್ಟಗಿಗೆ ವಲಸೆ ಬಂದರು
ಎಸ್‌ಸಿ ಮೀಸಲು ಕ್ಷೇತ್ರವಾದ ಬಳಿಕ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾನಪ್ಪ ಡಿ ವಜ್ಜಲ್‌ ಗೆದ್ದಿದ್ದರು. 2013ರಲ್ಲಿ ಪಕ್ಷ ಬದಲಿಸಿದ ಮಾನಪ್ಪ ವಜ್ಜಲ್‌ ಜೆಡಿಎಸ್‌ನಿಂದ ಶಾಸಕರಾಗಿದ್ದರು. ಆದರೆ, 2018ರಲ್ಲಿ ಕಾಂಗ್ರೆಸ್‌ನ ಡಿಎಸ್‌ ಹೂಲಗೇರಿ ಗೆಲ್ಲುವ ಮೂಲಕ ಮಾನಪ್ಪ ವಜ್ಜಲ್‌ ಅವರ ಹ್ಯಾಟ್ರಿಕ್‌ ಗೆಲುವಿಗೆ ಅಡ್ಡಿಯಾದರು. ಈ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್‌ ಮತ್ತೆ ಬಿಜೆಪಿಗೆ ಬಂದಿದ್ದು ವಿಶೇಷ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿಎಸ್‌ ಹೂಲಗೇರಿ 54,230 ಮತಗಳನ್ನು ಪಡೆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಿದ್ದು ಬಂಡಿ 49,284 ಮತಗಳನ್ನು ಪಡೆದು ಸುಮಾರು 5 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕ್ಷೇತ್ರದ ಹಾಲಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್‌ 47,385 ಮತ ಪಡೆಯುವುದರೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಸಲದ ಚುನಾವಣೆಯಲ್ಲಿ ಮೂರು ಪಕ್ಷಕ್ಕೂ ಸಮಾನ ಅವಕಾಶವಿದ್ದು, ಯಾರು ಗೆಲ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಜಾತಿ ಲೆಕ್ಕಾಚಾರ!
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ನಾಯಕರ ಸಂಖ್ಯೆಯಲ್ಲಿ ಹೆಚ್ಚು, ಕಡಿಮೆ ಸಮಬಲವಿದೆ. ಆದರೂ, 1983ರ ತನಕ ಲಿಂಗಾಯತರದೇ ಪಾರುಪತ್ಯ ಕ್ಷೇತ್ರದಲ್ಲಿ ಇತ್ತು. 1985ರ ವಿಧಾನಸಭೆ ಚುನಾವಣೆಯಲ್ಲಿ . ಲಿಂಗಾಯತರಲ್ಲಿನ ಒಡಕಿನ ಫಲವಾಗಿ ನಾಯಕರಿಗೆ ಲಾಭ ತಂದುಕೊಟ್ಟಿತು. ಬಳಿಕ ಮತ್ತೆ ಲಿಂಗಾಯತರ ತೆಕ್ಕೆಗೆ ಕ್ಷೇತ್ರ ಜಾರಿತು. ಆದರೆ, 2008ರ ಚುನಾವಣೆಯಿಂದ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಆ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದ್ದರೂ ಇದೀಗ ಲಿಂಗಾಯತರು, ನಾಯಕರು ಮತ್ತು ಕುರುಬರು ಅಭ್ಯರ್ಥಿಗಳ ಭವಿಷ್ಯ ಬರೆಯುವ ಶಕ್ತಿ ಪಡೆದುಕೊಂಡಿದ್ದಾರೆ.

Post a Comment

0Comments

Post a Comment (0)