ರಾಜ್ಯದ ಗಮನ ಸೆಳೆದ ಲೋಕಾಯುಕ್ತ ಮೊದಲ ಕೇಸ್ ಯಡಿಯೂರಪ್ಪಗೆ ಕಂಟಕವಾಗುತ್ತಾ ಈ ಕೇಸ್.?

Udayavani News
0

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಬೆಂಗಳೂರು,ಸೆ.14 : ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಅವರ ವಿರುದ್ಧ ವಿಶೇಷ ನ್ಯಾಯಾಲಯ ಬುಧವಾರ ತನಿಖೆಗೆ ಆದೇಶ ನೀಡಿದೆ. ಇದರಿಂದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದು ಬಿಎಸ್‌ವೈ ಮತ್ತು ಬಿಜೆಪಿಗೆ ಮುಜುಗರ ಉಂಟು ಮಾಡಲಿದೆ. ಹೈಕೋರ್ಟ್ ದೂರು ಮರುಸ್ಥಾಪನೆ ಮಾಡಿ ವಿಚಾರಣೆ ಮುಂದುವರಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದೆ.

ಮಾಜಿ ಸಿಎಂ ಬಿಎಸ್‌ವೈಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ಹಾಗಾಗಿ ಇದೀಗ ಬಿ.ಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ,‌ ಶಶಿಧರ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಸಚಿವ ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಿದ್ದಾರೆ.

ಹೈಕೋರ್ಟ್ ಆದೇಶವೇನು?: ಹೈಕೋರ್ಟ್ ಸೆ. 7ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ಅವರ ಕುಟುಂಬಸ್ಥರು ರಾಮಲಿಂಗಂ ಕನಸ್ಟ್ರಕ್ಷನ್ ಕಂಪನಿಯಿಂದ 12 ಕೋಟಿ ರೂ. ನಗದು ಸ್ವೀಕರಿಸಿದ ಆರೋಪ ಸಂಬಂಧ ದಾಖಲಾಗಿದ್ದ ಖಾಸಗಿ ದೂರನ್ನು ಮರು ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಪ್ರಕರಣವನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಗೆ ಆದೇಶಿಸುವಂತೆ ಕೋರಿ ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿದ್ದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರರಾದ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಂಬಂಧ ವಿಚಾರಣೆ ಪೂರ್ಣಗೊಳಿಸಿ ಕಾಯ್ದರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರ ಪೀಠವು ಪ್ರಕಟಿಸಿತು.

ತೀರ್ಪು ಪ್ರಕಟಿಸಿದ ನಂತರ ಯಡಿಯೂರಪ್ಪ ಪರ ವಕೀಲರು, ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾಲಾವಕಾಶ ನೀಡುವ ಬಗ್ಗೆ ವಿಶೇಷ ನ್ಯಾಯಾಲಯವೇ ತೀರ್ಮಾನಿಸಲಿ ಎಂದು ಹೇಳಿತು.

ಅಕ್ರಮ ಡಿನೋಟಿಫೈ ಪ್ರಕರಣದಲ್ಲಿ ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ರಿಲೀಫ್

ಈ ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ಆರೋಪಿಗಳ ವಿರುದ್ಧದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರುದಾರರು ಮಾಡಿರುವ ಆರೋಪಗಳ ಕುರಿತು ಮರು ವಿಚಾರಣೆ ನಡೆಸುವಂತೆ ಜನ ಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ. ಇದರೊಂದಿಗೆ ಈಗಾಗಲೇ ಭೂ ಸಂಕಷ್ಟದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇದೀಗ ಕಿಕ್ ಬ್ಯಾಕ್ ಪ್ರಕರಣವನ್ನು ಎದುರಿಸಬೇಕಿದೆ.

ದೂರು ಮುಂದುವರಿಸಲು ಅಡ್ಡಿ ಇಲ್ಲ: ಟಿ.ಜೆ. ಅಬ್ರಹಾಂ ಅವರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್, ಪ್ರಕರಣ ಸಂಬಂಧ ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಖಾಸಗಿ ದೂರು ದಾಖಲಿಸಲು ದೂರುದಾರರಿಗೆ ರಾಜ್ಯಪಾಲರು ಅಗತ್ಯ ಪೂರ್ವನುಮತಿ ನೀಡಲು ನಿರಾಕರಿಸಿದ್ದಾರೆ. ಅದನ್ನು ಆಧರಿಸಿ ದೂರು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ರದ್ದುಪಡಿಸಿತ್ತು.

 
ಆದರೆ, ರಾಜ್ಯಪಾಲರು ಪೂರ್ವಾನುಮತಿ ನಿರಾಕರಿಸಿದ ಮಾತ್ರಕ್ಕೆ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರಿನ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಪೂರ್ವಾನುಮತಿಗೆ ತನಿಖಾ ಸಂಸ್ಥೆಯ ಅಧಿಕಾರಿ (ಪೊಲೀಸ್ ಅಧಿಕಾರಿ) ಮನವಿ ಸಲ್ಲಿಸಬೇಕು ಹೊರತು ದೂರುದಾರರಲ್ಲ. ರಾಜ್ಯಪಾಲರು ದೂರುದಾರಿಗೆ ಪೂರ್ವಾನುಮತಿಯನ್ನು ನಿರಾಕರಿಸಿರುವುದಕ್ಕೆ ಕಾನೂನಿನ ಪ್ರಾಮುಖ್ಯತೆಯಿಲ್ಲವಾಗಿದ್ದು, ಅದನ್ನು ನಿರ್ಲಕ್ಷಿಸಬೇಕಿದೆ. ಆದ್ದರಿಂದ ರಾಜ್ಯಪಾಲರು ಪೂರ್ವಾನುಮತಿ ನೀಡಿಲ್ಲ ಎಂಬ ಕಾರಣಕ್ಕೆ ವಿಶೇಷ ನ್ಯಾಯಲಯ ದೂರು ರದ್ದುಪಡಿಸಿದ್ದು ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣವನ್ನು ಪುರಸ್ಥಾಪಿಸಿದೆ.

ಅಲ್ಲದೆ, ಖಾಸಗಿ ದೂರನ್ನು ವಜಾಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಯಾವ ಹಂತದದಲ್ಲಿ ಪ್ರಕರಣ ಇತ್ತೋ; ಅದೇ ಹಂತದಿಂದ ವಿಚಾರಣೆ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಬಿಡಿಎವಿನ ವಸತಿ ಯೋಜನೆ ಗುತ್ತಿಗೆ ನೀಡುವ ಸಂಬಂಧ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಪರವಾಗಿ ಐಎಎಸ್ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್ ಅವರು 12 ಕೋಟಿ ರೂ. ನೀಡಲು ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಗೆ ಬೇಡಿಕೆಯಿಟ್ಟಿದ್ದರು. ಚಂದ್ರಕಾಂತ್ ರಾಮಲಿಂಗ್ ಅವರು ಕೆ.ರವಿ ಅವರಿಗೆ 12 ಕೊಟಿ ರು. ಹಣ ನೀಡಿದ್ದರು. ಆ ಹಣವನ್ನು ಬಿ.ವೈ.ವಿಜಯೇಂದ್ರ ಮೂಲಕ ಯಡಿಯೂರಪ್ಪ ಅವರಿಗೆ ಪಾವತಿಸಲು ಪ್ರಕಾಶ್ ಅವರು ಪಡೆದುಕೊಂಡಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ಅಲ್ಲದೆ, ಹಣ ಪಾವತಿಸುವ ವಿಚಾರವಾಗಿ ಚಂದ್ರಕಾಂತ್ ಅವರು ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ ಅವರೊಂದಿಗೆ ಸಮಾಲೋಚನೆ ಮಾಡಿದ್ದು, ಅದರಂತೆ ಹಣ ಪಾವತಿದ್ದಾರೆ. ಇನ್ನೂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ, ಶಶಿಧರ ಮರಡಿ ಮತ್ತು ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ ಅವರು ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದಾರೆಂದು ದೂರಿದ್ದರು.

Post a Comment

0Comments

Post a Comment (0)