ನರಸಿಂಹರಾಜಪುರ: ತಾಲೂಕಿನ ಕಡಹೀನ ಬೈಲು ವ್ಯಾಪ್ತಿಯ ಸರ್ಕಾರಿ ಕಿರು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶಿಲುಬೆಯನ್ನು ಕ್ರೈಸ್ತ ಸಂಘಟನೆಗಳು ಹೋರಾಟಕ್ಕೆ ಮಣಿದು ತೆರವುಗೊಳಿಸಿವೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಡಹೀನಬೈಲು ಗ್ರಾಮದ ಸರ್ವೇ ನಂಬರ್ 56ರ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ತೆರವಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನರಸಿಂಹರಾಜಪುರ ಘಟಕವು ಕರಗುಂದ ಚಲೋ ಗೆ ಕರೆ ನೀಡಿ ಬೃಹತ್ ಹೋರಾಟ ನಡೆಸಿತ್ತು. ಈ ವೇಳೆ ಶಿಲುಬೆ ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ತಹಸೀಲ್ದಾರ್ ಗೆ ಒಂದು ತಿಂಗಳ ಗಡುವು ನೀಡಲಾಗಿತ್ತು. ನಿಗದಿತ ಕಾಲಾವಧಿ ಮಗಿದರೂ ಯಾವುದೇ ಕ್ರಮವಾಗದಿದ್ದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದವು.ಈ ಬಗ್ಗೆ ಮಾಹಿತಿ ಅರಿತ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಅನಧಿಕೃತ ಶಿಲುಬೆ ತೆರವಿಗೆ ಮುಂದಾದಾಗ, ಮಧ್ಯಪ್ರವೇಶಿಸಿದ ಕ್ರೈಸ್ತ ಸಂಘಟನೆಗಳು ಶಿಲುಬೆಯನ್ನು ತೆರವುಗೊಳಿಸಿವೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕರಗುಂದ ಕ್ರೈಸ್ತ ಗುರು ಎ.ಜೆ.ಜಾರ್ಜ್ ಈ ಭಾಗಗಳಲ್ಲಿ ಕ್ರೈಸ್ತರು ಅನ್ಯಧರ್ಮಿಯರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ. 8 ವರ್ಷಗಳ ಹಿಂದೆಯೆ ಶಿಲುಬೆ ನಿರ್ಮಿಸಿದ್ದೆವು. ಕಳೆದ ಜನವರಿಯಿಂದ ಶಿಲುಬೆ ವಿಚಾರವಾಗಿ ಸಮಸ್ಯೆಗಳು ಉದ್ಭವವಾದವು. ಕೆಲವು ಸಂಘಟನೆಗಳು ಕರಗುಂದ ಶಿಲುಬೆ ತೆರವಿಗೆ ಒತ್ತಾಯಿಸಿದ್ದವು. ಅನ್ಯಧರ್ಮಿಯರ ಮನಸ್ಸಿಗೆ ನೋವು ನೀಡಿ, ಶಿಲುಬೆ ನಿರ್ಮಾಣ ಬೇಡ ಎಂದು ಸೆಂಟ್ ಜಾನ್ಸ್ ಸಿರಿಯನ್ ಜಾಕೋಬೈಟ್ಸ್ ಚರ್ಚ್ ಸೇರಿ ಮೂರು ಪ್ರಮುಖ ಚರ್ಚ್ ಗಳ ಪ್ರಮುಖರು ಸೇರಿ ತೀರ್ಮಾನಿಸಿದೆವು ಎಂದು ಹೇಳಿದ್ದಾರೆ.