ಆದ್ಯ ವಚನಕಾರ,ವಿಶ್ವ ಮಾನ್ಯ ತವ ನಿಧಿಯ ಸಂತ, ಮುದನೂರಿನ ಶ್ರೀ ದೇವರ ದಾಸಿಮಯ್ಯನವರ : ಕಿರು ಪರಿಚಯ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು,ಮಾರ್ಚ್ 26 : ಭರತ ಭೂಮಿ ವಿಶ್ವದಲ್ಲಿಯೇ ಅತ್ಯಂತ ಪರಮ ಪವಿತ್ರ ಶ್ರೇಷ್ಠ ರಾಷ್ಟ್ರ, ಏಕೆಂದರೆ ಬೇರೆ ದೇಶಗಳಿಗಿಂತಲೂ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿಯೂ ಅತ್ಯಂತ ಸಮೃದ್ಧವಾದ ದೇಶ 'ಭಾರತ'. ಇಲ್ಲಿ ಅನೇಕ ಪುಣ್ಯಕ್ಷೇತ್ರಗಳು, ನದಿಸಾಗರಗಳು, ಯುಗ ಯುಗಗಳಿಂದಲೂ ಅನೇಕ ಋಷಿ-ಮುನಿಗಳು, ಸಾಧು-ಸಂತರು, ಶರಣರು, ಮಹಾತ್ಮರು, ಶಿವಯೋಗಿಗಳು ಅವತರಿಸಿ ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿ ಇದಾಗಿದೆ. ಇಂತಹ ಮಹಾನ್ ಪುರುಷರಲ್ಲಿ ಆದ್ಯವಚನಕಾರ, ತವನಿಧಿಯ ಸಂತ, ಮುದನೂರಿನ ಶ್ರೀ ದೇವರ ದಾಸಿಮಯ್ಯರೊಬ್ಬರು. ಆದರೆ ಈ ಪುಣ್ಯ ಪುರುಷರ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು 10ನೇ ಶತಮಾನದ ಅಂತ್ಯ 11 ನೇ ಶತಮಾನದ ಆದಿಯಲ್ಲಿ ಆಗಿಹೋದ ಮೊಟ್ಟಮೊದಲ ವಚನಕಾರರು. ಹಾಗಾಗಿ ಇವರ ಒಂದು ಕಿರುಪರಿಚಯ.

೧. *ಜನನ ಮತ್ತು ಜನ್ಮಸ್ಥಳ :-* 
ದೇವರ ದಾಸಿಮಯ್ಯನವರು ಸಗರನಾಡೆನಿಸಿಕೊಂಡಿರುವ ಇಂದಿನ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರಿನಲ್ಲಿ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ರಾಮನಾಥನ ಭಕ್ತರಾದ ' *ಶಂಕರಿ* ' ಮತ್ತು ' *ರಾಮಯ್ಯ* 'ರೆಂಬ ದಂಪತಿಗಳ ಉದರದಲ್ಲಿ “ *ಚೈತ್ರ ಮಾಸದ ಶುದ್ಧ ಪಂಚಮಿಯ* ದಿನದಂದು ಜನಿಸಿದರು. ಇವರನ್ನು ದಾಸ, ದಾಸಯ್ಯ, ದಾಸಿಮಯ್ಯ, ದಾಸಿದೇವ, ದೇವದಾಸ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ, ದಾಸಿಮಾರ್ಯ ಹೀಗೆ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. 

ದೇವಾಂಗ ಮೂಲ ಪುರುಷ ದೇವಲ ಮಹರ್ಷಿಯ ಏಳು ಅವತಾರಗಳಾದ ವಿದ್ಯಾಧರ, ಪುಷ್ಪದಂತ ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿಯಾಗಿ ಏಳನೆಯ ಅವತಾರವೇ ದೇವದಾಸ ಅಂದರೆ ( ದೇವರ ದಾಸಿಮಯ್ಯ) ಈ ಸಪ್ತ ಅವತಾರನ ಬಗ್ಗೆ ಕುರಿತು *ಬ್ರಹ್ಮಾಂಡ ಪುರಾಣದಲ್ಲಿನ ಶ್ಲೋಕಗಳು ಇಂತಿವೆ -* 

 *ದೇವಾಂಗ: ಪ್ರಥಮಾ ಸೃಷ್ಟಿ: ಶಂಕರಸ್ಯ ಮಹಾತ್ಮನಃ |* 
 *ವಿದ್ಯಾಧರೋ ದ್ವಾಪರಾದೌ ಮಧ್ಯೇಭೂತ್ ಪುಷ್ಪದಂತಕಃ ||*
 *ಅಂತೇವತಾರೋ ಬೇತಾಳ ಕಲೌವರರುಚಿ ಸ್ತಥಾ|* 
 *ಚಿತ್ರಯೋಗಿ ದೇವಶಾಲಿ ದೇವದಾಸೋಭಿವಂ ಸ್ತತಃ ||* 

ದೇವಾಂಗನ ಸಪ್ತಾವತಾರಗಳ ಬಗೆಗೆ ಇನ್ನೊಂದು ಶ್ಲೋಕವು ಹೀಗಿದೆ –

 *ವಿದ್ಯಾಧರಶ್ಚಿತ್ರಯೊಗೀ ಸಾಧುಕೋ ಪುಷ್ಪದಂತಕಃ।* *ಬೇತಾಳ ವರರುಚಿರ್ದಾಸೋ ದೇವಾಂಗ: ಸಪ್ತನಾಮಕ:।।* 

ಮುದನೂರಿನಲ್ಲಿರುವ ರಾಮತೀರ್ಥ, ಲಕ್ಷಣತೀರ್ಥ, ಸಕ್ಕರೆತೀರ್ಥ. ಮರಳತೀರ್ಥ ಪಾಂಡವತೀರ್ಥ, ಹಾಲುತೀರ್ಥ ಮತ್ತು ಸಂಗಮತೀರ್ಥಗಳು ದೇವಾಂಗನ ಸಪ್ತಾವತಾರಗಳ ದ್ಯೋತಕವೇ ಆಗಿವೆ ಎಂದು ಹೇಳಬಹುದು. ಅಂದು ಒಂದು ಚಿಕ್ಕ ಅಗ್ರಹಾರವಾಗಿದ್ದ ಮುದನೂರು ಇಂದು “ *ದಕ್ಷಿಣವಾರಣಾಸಿ* ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದಿನ ಕಾಲದಿಂದಲೂ ಈ ಗ್ರಾಮವು ನೈಸರ್ಗಿಕ ಪರಿಸರ ಮತ್ತು ಉಜ್ವಲ ಕ್ರಿಯಾಶೀಲ ಧಾರ್ಮಿಕ ಪರಿಸರಗಳಿಂದ ಇಂದಿಗೂ ಕಂಗೊಳಿಸುತ್ತಿದೆ. ಇಲ್ಲಿ ಅನೇಕ ಪ್ರಾಚೀನ ದೇವಾಲಯಗಳು, ಮತ್ತು ಇತರೆ ಐತಿಹಾಸಿಕ ಸ್ಮಾರಕಗಳನ್ನು ಕಾಣುತ್ತೇವೆ.

 *೨.ಬಾಲ್ಯ ಮತ್ತು ವಿದ್ಯಾಭ್ಯಾಸ :-* 
ದೇವರ ದಾಸಿಮಯ್ಯನವರು ಬಾಲ್ಯವನ್ನು ಆಟ, ಪಾಠ, ಧ್ಯಾನ, ಪೂಜೆಗಳಲ್ಲಿ ತಮ್ಮ ಹುಟ್ಟೂರಾದ ಮುದನೂರಿನಲ್ಲಿ ಕಳೆದರು. ಅಲ್ಲಿ ದೊರೆತ ಅಲ್ಪ ವಿದ್ಯೆಯಿಂದ ಅತೃಪ್ತರಾಗಿ ತಮ್ಮ ಜ್ಞಾನದ ತೃಷೆಯನ್ನು ಇಂಗಿಸುವ ಸಲುವಾಗಿ ಅಂದು ಶ್ರೀಶೈಲ ಸುಪ್ರಸಿದ್ಧ ವಿದ್ಯಾಕೇಂದ್ರವಾಗಿದುದ್ದರಿಂದ ಅಲ್ಲಿಗೆ ಹೋದರು. ಅಲ್ಲಿ ಸೂರ್ಯಸಿಂಹಾಸನ ಪೀಠದ ಮೂರನೆಯ ಜಗದ್ಗುರು ಶ್ರೀ ಚಂದ್ರಗಂಡ ಶಿವಾಚಾರ್ಯರಿಂದ ಶೈವದೀಕ್ಷೆ ಪಡೆದು ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಿಕೊಂಡರು.

 *ಘಟದೊಳಗೆ ತೋರುವ ಸೂರ್ಯನಂತೆ* 
 *ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು ಇದ್ದರೇನು? ಅದ* *ಕೂಡುವರೆ ಗುರುವಿನಿಂದಲ್ಲಾಗದು ಕಾಣಾ! ರಾಮನಾಥ.* 

ಎಂದು ದಾಸಿಮಯ್ಯನವರು ಗುರು ಕರುಣೆಯಿಂದ ಅವರಲ್ಲಾದ ಪರಿವರ್ತನೆಯನ್ನು ತಾವೇ ಮನೋಜ್ಞವಾಗಿ ಹೇಳಿ ಗುರು ಚರಣವೆಂಬ ಅಗ್ನಿಯ ಮೇಲೆ ತನುವೆಂಬ ತೃಣವನ್ನಿರಿಸಿ ಸರ್ವಾಂಗವೆಲ್ಲ ಲಿಂಗಮಯವನ್ನಾಗಿ ಮಾಡಿಕೊಂಡರು. ದಾಸಿಮಯ್ಯನವರು ತಮ್ಮ ಆತ್ಮತೃಪ್ತಿಗೆ ಬೇಕಾದ ಜ್ಞಾನವನ್ನು ಸಂಪಾದಿಸಿ ಕೊಂಡರು. ಸಂಸ್ಕೃತ, ಕನ್ನಡ ಮೊದಲಾದ ಭಾಷೆ ಬಲ್ಲವರಾಗಿ ಗುರುವಿನ ಆದೇಶದಂತೆ, ಪುಣ್ಯಕ್ಷೇತ್ರಗಳ ದರ್ಶನಗೈಯುತ್ತ, ಜಿಜ್ಞಾಸುಗಳಿಗೆ ಸನ್ಮಾರ್ಗತೋರುತ್ತ, ಶರಣ ತತ್ವವನ್ನು ಪ್ರಚಾರ ಮಾಡಿದರು. ಮಾರ್ಗ ಮಧ್ಯದಲ್ಲಿ ಕುಲೀನರು, ದುಷ್ಟರು ಇವರ ಮೇಲೆ ದಂಡೆತ್ತಿ ಬಂದರೂ ವಿಚಲಿತರಾಗದೆ ಅವರಿಗೆ

 *ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು?* 
 *ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.* 

ಎಂದು ಸದ್ಭುದ್ಧಿಯ ಬೋಧನೆಗೈದು, ಪವಿತ್ರಾತ್ಮರನ್ನಾಗಿ, ಶಿಷ್ಟರನ್ನಾಗಿ ಮಾಡಿರುವ ಕೀರ್ತಿ, ಗೌರವ ಶರಣ ಸಂಪ್ರದಾಯದಲ್ಲಿ ಮೊಟ್ಟಮೊದಲು ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ.

 *೩.ಗೃಹಸ್ಥರಾಗಿ ದಾಸಿಮಯ್ಯನವರು* :- 
ದೇವರ ದಾಸಿಮಯ್ಯನವರು ಯೌವನಾವಸ್ಥೆಗೆ ಬಂದಾಗ ಇವರ ಮದುವೆ ಪ್ರಸ್ತಾಪ ಬರುತ್ತದೆ. ಆಗ ದಾಸಿಮಯ್ಯನವರು ವಿವಾಹ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಕೊನೆಗೆ ತಂದೆ-ತಾಯಿ, ಗುರು-ಹಿರಿಯರ ಒತ್ತಾಯಕ್ಕೆ ಮಣಿದು ತಮ್ಮ ಬಾಳ ಸಂಗಾತಿಗಾಗಿ ತಮ್ಮ ಮನದ ಇಚ್ಛೆಯಂತೆ ನಡೆಯುವ ಕನ್ಯಾರತ್ನವನ್ನು ಪಡೆಯಲು “ *ಮರಳು ಮಿಶ್ರಿತ ಅಕ್ಕಿ ಮತ್ತು ಕಬ್ಬು"* ಜೊತೆಗೆ ಇಟ್ಟುಕೊಂಡು ಅವು ತೋರಿಸಿ ನೀರು ಮತ್ತು ಸೌದೆಯಿಲ್ಲದೆ ಅಡುಗೆ ಮಾಡಿ ಉಣಬಡಿಸಬೇಕೆಂಬ ಪರೀಕ್ಷೆಯೊಂದಿಗೆ ಅನೇಕ ಊರುಗಳನ್ನು ತಿರುಗುತ್ತ ನಡೆದರು. ಕೊನೆಗೆ ಅಫಜಲಪೂರ ತಾಲೂಕಿನ ಗೊಬ್ಬರು ಗ್ರಾಮದ '" *ಮಲ್ಲಿನಾಥ ಮತ್ತು ಮಹಾದೇವಿ”* ಯವರ ಮಗಳಾದ *ದುಗ್ಗಳೆ* , ದಾಸಿಮಯ್ಯನವರೊಡ್ಡಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬಾಳ ಸಂಗಾತಿಯಾದಳು.

ಇನ್ನೊಂದು ಕಡೆಯಲ್ಲಿ ದಾಸಿಮಯ್ಯನವರಿಗೆ ಬರಿ ಹೆಣ್ಣು ಬೇಕಾಗಿರಲಿಲ್ಲ ಒಲವಿನ ಕಣ್ಣು ಬೇಕಾಗಿತ್ತು. ಅಂತಹ ಸಹಧರ್ಮಿಣಿಗಾಗಿ ನೀರಿಲ್ಲದೆ ಅಡುಗೆ ಮಾಡಬೇಕೆಂಬ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಅರಸುತ್ತ ಬಂದಾಗ ದುಗ್ಗಳೆ ಅವರ ಪಾದೋದಕದಿಂದ ಅಡುಗೆ ಮಾಡಿ ಬಡಿಸಿ ಕೃತಾರ್ಥಳಾಗಿ ಸಹಧರ್ಮಿಣಿಯಾದಳು. ಇಂತಹ ಪತ್ನಿ ದುಗ್ಗಳೆಯನ್ನು ಕುರಿತು ದಾಸಿಮಯ್ಯನವರು ಹೀಗೆ ಹೇಳಿದ್ದಾರೆ. 

 *ಬಂದುದನರಿದು ಬಳಸುವಳು ಬಂದುದ ಪರಿಣಾಮಿಸುವಳು* *ಬಂಧು ಬಳಗವ ಮರೆಸುವಳು* 
 *ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥ.* 

ಶರಣ ಸಂಪ್ರದಾಯದಲ್ಲಿ ಪತಿಯಿಂದ ಹೊಗಳಿಸಿಕೊಂಡ ಮೊಟ್ಟ ಮೊದಲನೆಯ ಸತಿ ದುಗ್ಗಳೆ. ಪತಿಗೆ ತಕ್ಕ ಸತಿಯಾಗಿ ಮುಂದಿನ ಶರಣೆಯರಿಗೆ ಮಹಾಸಾಧ್ವಿ ಶಿರೋಮಣಿಯಾಗಿದ್ದಾಳೆ. ಸತಿಪತಿಗಳಿಗಳಿಬ್ಬರು ಒಬ್ಬರಿಗೊಬ್ಬರು ಅರಿತುಕೊಂಡು ಅನ್ನೋನ್ಯವಾಗಿದ್ದು ತಮ್ಮ ಸಂಸಾರವನ್ನು ಅಮೃತಮಯ ಮಾಡಿಕೊಂಡಿದ್ದರು.

 *ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ* *ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ* *ಬೆರೆದಂತೆ ಕಾಣಾ! ರಾಮನಾಥ.* 

ದಾಸಿಮಯ್ಯನವರು ಪ್ರಾಪಂಚಿಕ, ಪಾರಮಾರ್ಥಿಕಗಳೆರಡನ್ನೂ ಒಟ್ಟಿಗೆ ನಿಭಾಯಿಸುತ್ತ, ಕಾಯಕ, ದಾಸೋಹ ಮತ್ತು ಜ್ಞಾನಬೋಧನೆ ಮಾಡುತ್ತಿದ್ದರು.

೪. ಸಂಸಾರ ಶ್ರೇಷ್ಠವೋ? ಸಂನ್ಯಾಸ ಶ್ರೇಷ್ಠವೋ?
ಒಮ್ಮೆ ದಾಸಿಮಾರ್ಯರು ಬಟ್ಟೆ ನೇಯುತ್ತಿರುವಾಗ ಇವರಲ್ಲಿಗೆ ಯುವಕರಿಬ್ಬರು ಬಂದು ಗ್ರಹಸ್ಥಾಶ್ರಮ ಶ್ರೇಷ್ಟವೋ? ಅಥವಾ ಸಂನ್ಯಾಸಾಶ್ರಮ ಶ್ರೇಷ್ಟವೋ? ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ದಾಸಿಮಯ್ಯನವರು ಮೌಖಿಕವಾಗಿ ಉತ್ತರಕೊಡದೆ, ಪ್ರಯೋಗಾತ್ಮಕ ಮತ್ತು ಪ್ರತ್ಯಕ್ಷ ನಿದರ್ಶನಗಳ ಮೂಲಕ ಉತ್ತರಿಸುವರು. “ಬೆಳಕಿದ್ದರೂ ಎಳೆ ಕತ್ತುಸಿ ಹೋದುದ್ದರಿಂದ ದೀಪವ ತರಲೂ ಮತ್ತು ಊಟಕ್ಕೆ ಕುಳಿತಾಗ ನೆನ್ನೆ ಮಾಡಿದ ಅಥವಾ ಆರಿದ ಅಂಬಲಿ ಸುಡುತ್ತಿದೆಂದು ಗಾಳಿ ಹಾಕಲು ಹೆಂಡತಿಗೆ ಹೇಳಿದಾಗ ಅದಕ್ಕೆ ಆ ಸತಿಸಾದ್ವಿಮಣಿ ಮರುಮಾತನಾಡದೆ ದೀಪವ ತಂದು ಕೊಡುವಳು ಮತ್ತು ಗಾಳಿಯನ್ನೂ ಹಾಕುವಳು" ಪತಿಯ ಮಾತಿಗೆ ಚಕಾರವೆತ್ತದ ಇಂಥಹ ಸತಿಯಿದ್ದರೆ ಸಂಸಾರ ಶ್ರೇಷ್ಠ ವಿರುದ್ಧವಾಗಿ ನಡೆದರೆ ಸಂನ್ಯಾಸವೇ ಶ್ರೇಷ್ಠವೆಂದರು.

ಈ ಕಥೆಯು ಇಡೀ ಶರಣಸಂಕುಲ ದಂಪತಿಗಳಿಗೆ ದಾರಿದೀಪವಾಗಿದೆ. ಇಷ್ಟೇ ಅಲ್ಲ ದಾಸಿಮಯ್ಯನವರ ಜೀವನದ ಪ್ರತಿಯೊಂದು ಸನ್ನಿವೇಶ ಮತ್ತು ವಚನಗಳು ನಂತರದ ಶರಣರ ಮೇಲೆ ಗಾಢವಾದ ಪ್ರಭಾವ ಬೀರಿರುವುದು ಗಮನಾರ್ಹ ಸಂಗತಿಯಾಗಿದೆ.

 ೫.ಕಾಯಕಯೋಗಿ ದಾಸಿಮಯ್ಯ 
ದಾಸಿಮಯ್ಯನವರು ಮೊಟ್ಟಮೊದಲು ಕಾಯಕಕ್ಕೆ ಉನ್ನತವಾದ ಮೌಲ್ಯವನ್ನು ತಂದುಕೊಟ್ಟರು. ಕಾಯಕಭಕ್ತಿ ಮತ್ತು ಕಾಯಕಪ್ರೀತಿ ಇವು ದಾಸಿಮಯ್ಯನವರ ಅವಿಭಾಜ್ಯ ಅಂಗಗಳಾಗಿದ್ದವು. ಇವರ ಅಪೂರ್ವವಾದ ಶಿವಭಕ್ತಿ, ದಾಸೋಹಭಾವನೆ, ಕಾಯಕ ಪೂಜ್ಯತೆ, ಶಿವಯೋಗ ಸಾಧನೆ, ಸಮಾಜೋದ್ದಾರದ ಚಿಂತನೆ ಮೊದಲಾದ ಅಂಶಗಳು ಅವರ ಜೀವನ ಚರಿತ್ರೆ ಹಾಗೂ ಅವರ ವಚನಗಳು ಮೂಲಕ ಅರಿಯಬಹುದು. ಇವರು ಸತ್ಯ, ಶುದ್ಧ ಮನೋಭಾವನೆಯಿಂದ ಬಟ್ಟೆ ನೇಯುವ ವೃತ್ತಿಯಲ್ಲಿ ಪ್ರವೃತ್ತರಾಗಿ ನೇಯ್ಗೆ ವೃತ್ತಿಯ ಕಾಯಕ ಯೋಗಿಗಳಾದರು. ತಾವು ಮಾಡಿದ ಕಾಯಕದ ಬಗ್ಗೆ ಹೆಮ್ಮೆಯಿಂದ ವಚನರೂಪದಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.

 ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ ಸಮಗಾಲನಿಕ್ಕಿ* *ಅಣಿಯೇಳ ಮುಟ್ಟದೆ
 *ಹಿಡಿದ ಲಾಳಿಯ ಮುಳ್ಳು ಕಂಡಿಕೇಯ* *ನುಂಗಿತ್ತು ಈ ಸೀರೆಯ ನೇಯ್ದವ ನಾನೋ* *ನೀನೋ? ರಾಮನಾಥ.* ಎಂದು ಹೇಳಿರುತ್ತಾರೆ.

 ೬.ತವನಿಧಿ ದಾಸಿಮಯ್ಯ :-
ದೇವರ ದಾಸಿಮಯ್ಯನವರು ನಿರ್ಮಲವಾದ ಭಕ್ತಿಯಿಂದ ನೇಯ್ದ ವಸ್ತ್ರವನ್ನು ಶಿವನಿಗಿತ್ತು ' *ತವನಿಧಿ* ' ಪಡೆದ ಪವಾಡವು ಜನಜನಿತವಾಗಿದೆ. ಹದಿನಾಲ್ಕು ವರ್ಷಗಳವರೆಗೆ ನಿರಂತರವಾಗಿ ವಸ್ತ್ರವನ್ನು ನೇಯ್ದು ಅದನ್ನು ಮಾರುವುದಕ್ಕೆಂದು ಸಂತೆಗೆ ಒಯ್ದಾಗ ಎಲ್ಲರೂ ಉತ್ಸುಕತೆಯಿಂದ ನೋಡಿ ಆನಂದಿಸುತ್ತಾರೆ. ಆದರೆ ಬೆಲೆ ಕಟ್ಟುವ ಶಕ್ತಿ ಯಾರಿಗೂ ಇರಲಿಲ್ಲ. ಬಂದು ನೋಡಿ ಹಿಂದಿರುಗುವವರೇ ಹೊರತು ಯಾರಿಗೂ ಕೊಂಡುಕೊಳ್ಳುವ ಧೈರ್ಯವಿರಲಿಲ್ಲ. ಮರಳಿ ಮನೆಗೆ ತೆಗೆದುಕೊಂಡು ಬರುವಾಗ ದಾರಿಯಲ್ಲಿ ವೃದ್ಧಜಂಗಮನೊಬ್ಬನು ಚಳಿಯಿಂದ ನಡುಗುತ್ತ ಬಂದು ದಾಸಿಮಯ್ಯನವರಿಗೆ ಹೊದೆಯಲು ವಸ್ತ್ರವನ್ನು ಕೇಳುತ್ತಾನೆ. ದಾಸಿಮಯ್ಯನವರು ತಮ್ಮಲ್ಲಿದ್ದ ಆ ಹೊಸ ವಸ್ತ್ರವನ್ನೇ ಹೊದ್ದುಕೊಳ್ಳಲು ಕೊಡುತ್ತಾರೆ. ಅದನ್ನು ತೆಗೆದುಕೊಂಡ ಆ ವೃದ್ಧಜಂಗಮನು ದಾಸಿಮಯ್ಯನವರ ಎದುರಿನಲ್ಲಿಯೇ ಅದನ್ನು ಹರಿದು ಹಾಕುತ್ತಾನೆ. ಅದನ್ನು ಶಾಂತಚಿತ್ತದಿಂದ ವೀಕ್ಷಿಸಿದ ದಾಸಿಮಯ್ಯನವರ ದೃಢತೆಗೆ ಒಲಿದು ಈಶ್ವರನು ಪ್ರತ್ಯಕ್ಷನಾಗಿ ತವನಿಧಿಯನ್ನು ದಯಪಾಲಿಸುತ್ತಾನೆ. ಅಂದಿನಿಂದ ದಾಸಿಮಯ್ಯನವರು " *ತವನಿಧಿ ದಾಸಿಮಯ್ಯ"* ಎಂದು ಪ್ರಸಿದ್ಧರಾದರು.

ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ವಿಶ್ವದ ಪ್ರಥಮ ವಚನಕಾರರಾಗಿ " *ರಾಮನಾಥ* " ಎಂಬ ನಾಮಾಂಕಿತದಿಂದ ದೇವರ ದಾಸಿಮಯ್ಯನವರು *176* ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಪ್ರತಿಯೊಬ್ಬ ಮಾನವರು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದ್ದಾರೆ.

೭. *ವಚನಕಾರರಾಗಿ ದಾಸಿಮಯ್ಯನವರು :--* 
ದಾಸಿಮಯ್ಯನವರ ಸಾಹಿತ್ಯ ಪರಿಚಯಕ್ಕೆ ಬಂದರೆ ಹನ್ನೊಂದನೆಯ ಶತಮಾನ ವಚನಸಾಹಿತ್ಯದ ಪ್ರಾರಂಭದ ಕಾಲ. 'ವಚನ' ಎಂಬ ಪದ ಮಾತು, ನುಡಿ ಎಂಬರ್ಥಗಳನ್ನು ಸೂಚಿಸುತ್ತದೆ. ಇದು ಸಾಹಿತ್ಯದ ಒಂದು ರೂಪ, ಸಾಹಿತ್ಯದ ಒಂದು ಪ್ರಕಾರ, ಈ ಶತಮಾನದಲ್ಲಿ ಬೀಜರೂಪದಲ್ಲಿದ್ದ ವಚನ ಸಾಹಿತ್ಯವು ಹನ್ನೆರಡನೆಯ ಶತಮಾನದಲ್ಲಿ ಹೆಮ್ಮರವಾಗಿ ಬೆಳೆಯಿತು. ವಿಪುಲವಾದ ವಚನಸಾಹಿತ್ಯ ಸಾಗರಕ್ಕೆ ಮೂಲ ಸೆಲೆ ದೇವರ ದಾಸಿಮಯ್ಯ. ಇವರು ಬಸವ ಪೂರ್ವಯುಗದವರು. ಮುಂದೆ ಬಂದ ವಚನಕಾರರಿಗೆ ಇವರ ವಚನಗಳೇ ಸ್ಫೂರ್ತಿ ನೀಡಿವೆ. ಪರಮಾತ್ಮನ ಸ್ವರೂಪ , ಪರಮಾತ್ಮ ಜೀವಾತ್ಮರಿಗಿರುವ ಸಮ್ಯಕ್ ಸಂಬಂಧ, ಮೋಕ್ಷ, ಸ್ವರೂಪ, ಯೋಗ, ಗುರುವಿನ ಲಕ್ಷಣ, ಭಕ್ತಿಯ ಅಭಿಮಾನ, ಧನ್ಯತೆಯ, ಸಮರ್ಪಣಭಾವ, ಧರ್ಮ, ನೀತಿ, ಜೀವನ್ಮುಕ್ತಿಯ ಸ್ಥಿತಿ, ಇವೆಲ್ಲವೂ ಬಹು ಸ್ವಾರಸ್ಯವಾಗಿ ದೇವರ ದಾಸಿಮಯ್ಯನವರು ತಮ್ಮ ವಚನ ಗಳಲ್ಲಿ ಪ್ರತಿಪಾದಿಸಿದ್ದಾರೆ. ಆಡುವ ಮಾತಿನಲ್ಲಿಯೇ ಆಳವಾದ ಅರ್ಥಭಾವ ಧ್ವನಿಗಳನ್ನು ತುಂಬುವುದರಲ್ಲಿ ದಾಸಿಮಯ್ಯನವರನ್ನು ಸರಿಗಟ್ಟುವ ವಚನಕಾರರು ವಿರಳ. ಅವರ ವಚನಗಳಲ್ಲಿ ಬಹು ಕಟುವಾದ ವಿಡಂಬನೆಯಿದೆ. ಅಲ್ಲಿ ಜನತೆಯ ನಡೆ, ನುಡಿ, ಧರ್ಮಾಚರಣೆಗಳಲ್ಲದೆ ಲೋಪ ದೋಷಗಳನ್ನು ಖಂಡಿಸಿ, ಅವರನ್ನು ನೇರ ಮಾರ್ಗದಲ್ಲಿ ಭಕ್ತಿ, ಜ್ಞಾನಗಳ ಮುಕ್ತಿಯ ಮಾರ್ಗದಲ್ಲಿ ಕರೆದೊಯ್ಯವ ಬಯಕೆಯನ್ನು ಕಾಣಬಹುದು. ಅದರ ಪರಿಣಾಮವಾಗಿ ವಚನಗಳಲ್ಲಿ ಆವೇಶ, ಉತ್ಸಾಹ, ಚುರುಕು, ಚುಚ್ಚು ಮಾತು, ಬಿಚ್ಚುಮಾತು ವ್ಯಂಗ ಕಾಣಬಹುದು.
ದಾಸಿಮಯ್ಯನವರು ಒಂದು ಮಾತನ್ನು ಹಲವಾರು ಅರ್ಥಗಳಲ್ಲಿಯೂ, ಶ್ಲೇಷಾರ್ಥದಲ್ಲಿಯೂ ಸಮರ್ಥ ಹಾಗೂ ಸಮಯೋಚಿತವಾಗಿ ಬಳಸುವುದರಲ್ಲಿ ನಿಪುಣರು. 
'' *ಮಣಿವಡೆ ಶಿವಭಕ್ತ ಮಣಿಯ ಕೆಟ್ಟಲೆ ಬೇಕು"* ಎಂಬ ವಚನದಲ್ಲಿ 'ಮಣಿ' ಶಬ್ದವನ್ನು ತಲೆಬಾಗು, ರುದ್ರಾಕ್ಷಿ, ಸೇವೆ, ರತ್ನ, ಎಂಬೆಲ್ಲ ಅರ್ಥಗಳಲ್ಲಿ ಬಳಸಿದ್ದಾರೆ. *''ಬಯಲು ಬಣ್ಣವ ಮಾಡಿ* " ಎಂಬ ವಚನದಲ್ಲಿ 'ಬಯಲು ಎಂಬ ಶಬ್ದವನ್ನು ಪರಿಪೂರ್ಣ ಸ್ಥಿತಿ, ಶೂನ್ಯ ಎಂಬ ಎರಡು ಅರ್ಥಗಳಲ್ಲಿ ಪ್ರಯೋಗಿಸಿದ್ದಾರೆ. “ಬಣ್ಣ'' ಸಾಮಾನ್ಯ ಅರ್ಥದಲ್ಲಿ ''ವರ್ಣ'' ವಿಶಿಷ್ಟಾರ್ಥದಲ್ಲಿ "ಸೃಷ್ಟಿ" " *ನೀನೀಶನೀಯದೆ ಮಾನೀಸನೀವನೆ? ನೀನೀಸುವ ಕಾರಣ ಮಾನೀಸನಿವನು"* ಎಂಬ ವಚನದಲ್ಲಿ ಇಶ- ಮಾನೀಶ- ಇಸು- ಈ ಮೂರು ಪದಗಳನ್ನು ಹೇಗೆ ವರ್ಣಿಸಿದ್ದಾರೆ ಎಂದು ತಿಳಿಯಬಹುದು. ವಿಶ್ವದ ಪ್ರಥಮ ವಚನಕಾರರಾಗಿ " *ರಾಮನಾಥ* " ಎಂಬ ನಾಮಾಂಕಿತದಿಂದ 176 ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳು ಅರ್ಥೈಸಿಕೊಳ್ಳಲು ಬಹು ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಪ್ರತಿಯೊಬ್ಬ ಮಾನವರು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವನ್ನು ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದ್ದಾರೆ.ಅವರ ಒಂದು ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ನಮ್ಮ ಜೀವನ ಸಾರ್ಥಕವಾಗುತ್ತದೆ. ಇಂತಹ ಮಹಾಪುರುಷರನ್ನು ಪಡೆದ ಸಮಾಜವೇ ಧನ್ಯ.

 ಡಾ. ಈಶ್ವರಾನಂದ ಸ್ವಾಮೀಜಿ
ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ (ರಿ) 
ಮುದನೂರು ಯಾದಗಿರಿ ಜಿಲ್ಲೆ.

Post a Comment

Previous Post Next Post