ಸುರಪುರ ತಾಲ್ಲೂಕಿನ ರೈತ ದೇವಿಂದ್ರಪ್ಪ ಟೇಲರ್ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ

Udayavani News
0


ತೀವ್ರ ಬರಗಾಲ, ಬೆಳೆ ವೈಫಲ್ಯ ಮತ್ತು ₹20 ಲಕ್ಷಕ್ಕೂ ಅಧಿಕ ಸಾಲದ ಒತ್ತಡ; ಕೀಟನಾಶಕ ಸೇವಿಸಿ ಜೀವ ಅಂತ್ಯ
ವರದಿ : ರಾಘವೆಂದ್ರ ಮಾಸ್ತರ


ಸುರಪುರ, ಸೆಪ್ಟೆಂಬರ್ 29: ತೀವ್ರ ಬರಗಾಲ, ಬೆಳೆ ವೈಫಲ್ಯ ಹಾಗೂ ಸಾಲದ ಒತ್ತಡ ತಾಳಲಾರದೆ ರೈತನೊಬ್ಬ ಬೆಳೆಗಳ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನು  ದೇವಿಂದ್ರಪ್ಪ ತಂದೆ ಕೃಷ್ಣಪ್ಪ ಟೇಲರ್ (46) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ದೇವಿಂದ್ರಪ್ಪ ಅವರು ಸುರಪುರದ ಕರ್ನಾಟಕ ಬ್ಯಾಂಕ್‌ನಲ್ಲಿ ಸುಮಾರು ₹10 ಲಕ್ಷ ಕೃಷಿ ಸಾಲ ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು ₹10 ಲಕ್ಷ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬಿತ್ತಿದ ಬೆಳೆ ಕೈಗೆ ಬಾರದೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಸಾಲದ ಒತ್ತಡದಿಂದ ಮನನೊಂದು ಅವರು ಬೆಳೆಗಳ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಯಡಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಕುಟುಂಬದವರ ಆಕ್ರಂದನ ಮನಕಲಕುವಂತಿದ್ದು, ಗ್ರಾಮಸ್ಥರು ಹಾಗೂ ಬಂಧು-ಬಳಗ ಕಂಬನಿ ಮಿಡಿದಿದ್ದಾರೆ.

ಸ್ಥಳೀಯರು ಹಾಗೂ ರೈತ ಸಂಘಟನೆಗಳು ಮೃತ ರೈತನ ಕುಟುಂಬಕ್ಕೆ ತಕ್ಷಣ ಪರಿಹಾರ, ಸಾಲಮನ್ನಾ ಹಾಗೂ ಅಗತ್ಯ ನೆರವು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Post a Comment

0Comments

Post a Comment (0)