ರಾಯಚೂರು: ಬೇರೆಯವರ ಆಸ್ತಿಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಜಾಲವನ್ನು ಬೇಧಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಮತ್ತು ಸುತ್ತ - ಮುತ್ತಲಿನ ಪ್ರದೇಶಗಳಲ್ಲಿ ಸುಮಾರು ದಿನಗಳಿಂದ ಖಾಲಿ ಇರುವ ಖಾಲಿ ನಿವೇಶನ ಮತ್ತು ಉಳುಮೆ ಮಾಡದ ಬೀಳು ಜಮೀನುಗಳನ್ನು ಗುರುತಿಸಿ ಅಂತಹ ಜಮೀನು ಮತ್ತು ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳಿಗೆ ಸಂಬಂಧಿಸಿದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಹೆಸರಿಗೆ ನೋಂದಾಯಿಸಿಕೊಳ್ಳುವ ಜಾಲ ಪತ್ತೆಯಾಗಿದ್ದು, ಇಂತಹ ಒಟ್ಟು ಆರು ಪ್ರಕರಣಗಳಲ್ಲಿ ಐವರನ್ನು ಬಂಧಿಸಿ 20 ಲಕ್ಷ ರೂ. ಹಾಗೂ ಕಾರೊಂದನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಮೀನು ಮತ್ತು ನಿವೇಶನಗಳ ಮಾಲಕರಿಗೆ ಸಂಬಂಧಿಸಿದ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ನಕಲಿಯಾಗಿ ಸೃಷ್ಟಿಸಿ ಮೂಲ ಮಾಲಕರ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಆಸ್ತಿಯ ಮಾಲಕರೆಂದು ನಂಬಿಸಿ, ನಂತರ ಆಸ್ತಿಗಳನ್ನು ಬೇರೆಯವರ ಹೆಸರಿಗೆ ನೊಂದಾಯಿಸಿಕೊಂಡು ನಂತರ ಬೇರೆ ಬೇರೆ ಜನರಿಗೆ ಮಾರಾಟ ಮಾಡುವ ಆರೋಪಿಗಳು, ನಂತರ ಅವರಿಂದ ಭಾರಿ ಮೊತ್ತದ ಹಣ ಪಡೆದುಕೊಂಡು ವಂಚಿಸಿದ ಬಗ್ಗೆ ಆಸ್ತಿಗಳ ಮೂಲ ಮಾಲಕರು ನೀಡಿದ ದೂರಿನ ಮೇರೆಗೆ ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆ,ಲ ಹಾಗೂ ಸಿರವಾರ ಪೊಲೀಸ್ ಠಾಣೆಯಲ್ಲಿ ಒಟ್ಟು 06 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.
ಆರೋಪಿಗಳಾದ ಮುಹಮ್ಮದ್ ಜಾವೀದ್, ಅಕ್ಷಯ ಕುಮಾರ ಭಂಡಾರಿ, ನೀಲಕಂಠ ಮೇಟಿ, ಅಂಜಿನೆಯ ಹಾಗೂ ಉಪೇಂದ್ರ ಕುಮಾರ ಎಂಬವರನ್ನು ಬಂಧಿಸಲಾಗಿದೆ.
ರಾಯಚೂರು ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ರಾಯಚೂರು ಡಿ.ಎಸ್.ಪಿ ತನಿಖೆ ಕೈಗೊಂಡು ವಂಚಕರ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.