ನೂರಾರು ಕೋಟಿ ರೂ ಅವ್ಯವಹಾರ; ಸಿದ್ದರಾಮಯ್ಯ ಸಂಪುಟದ ಮತ್ತೊಬ್ಬ ಸಚಿವರ ರಾಜೀನಾಮೆಗೆ...

Udayavani News
0
ಬೆಂಗಳೂರು, ಆಗಸ್ಟ್‌ 08: ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ನೂರಾರು ಕೋಟಿ ಅವ್ಯವಹಾರ ನಡೆಸಿರುವ ಸಚಿವ ಸಂತೋಷ್ ಲಾಡ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಆಗ್ರಹಿಸಿದ್ದಾರೆ.

ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ನೂರಾರು ಕೋಟಿ ಹಣವನ್ನು ಲೂಟಿ ಮಾಡಿರುವ ಸಂಬಂಧ ಪುರಾವೆಗಳ ದಾಖಲೆಗಳನ್ನು ಬಿಡುಗಡೆಗೊಳಿಸದರು.

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸುಳ್ಳು ತಪಾಸಣೆಯ ದಾಖಲೆಗಳನ್ನು ನೀಡಿದ್ದಾರೆ. ತಪಾಸಣೆ ನಡೆಸದೇ ಇಡೀ ರಾಜ್ಯದಿಂದ ಅಂದಾಜು 300 ಕೋಟಿಗಿಂತ ಹೆಚ್ಚು ಹಣವನ್ನು ಪಡೆದು ಸರ್ಕಾರ ಲೂಟಿ ಹೊಡೆದಿದೆ ಎಂದು ಕೆ.ಎಸ್. ನವೀನ್ ಅವರು ಆರೋಪಿಸಿದರು.

1982 ರ ಇಸವಿಯಲ್ಲಿ ಹೆಸರಾಂತ ಸಿನಿಮಾ 'ಕಾರ್ಮಿಕ ಕಳ್ಳನಲ್ಲ' ಬಿಡುಗಡೆಯಾಗಿತ್ತು. ಅದರಲ್ಲಿ ಮೇರುನಟರಾದ ವಿಷ್ಣುವರ್ಧನ್ ಮತ್ತು ಶಂಕರ್‍ನಾಗ್ ಅವರು ನಟಿಸಿದ್ದರು. ಶ್ರಮಜೀವಿ ಕಾರ್ಮಿಕನು ಕಳ್ಳನಾಗಿರುವುದಿಲ್ಲವೆಂಬ ಸಂದೇಶ ಆ ಚಿತ್ರದಲ್ಲಿ ಇತ್ತು. ಆದರೆ, ಇಂದು ನಾವು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿರುವುದು ಏನು ಎಂದರೆ ಕಾರ್ಮಿಕ ಕಳ್ಳನಲ್ಲ್ಲ, ಕಾರ್ಮಿಕ ಸಚಿವ ಕಳ್ಳಾನಾ? ಎಂದು ಅವರು ಪ್ರಶ್ನಿಸಿದರು.

ಕಟ್ಟಡ ಕಾರ್ಮಿಕರ ನಿಗಮಕ್ಕೆ ಸಾವಿರಾರು ಕೋಟಿ ಹಣವನ್ನು ಸೆಸ್ ಮೂಲಕ ಸಂಗ್ರಹ ಮಾಡಿ, ಅದನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತದೆ. ಈ ಪೈಕಿ ಕಾರ್ಮಿಕರಿಗೆ 20 ಆರೋಗ್ಯ ತಪಾಸಣೆ ಮಾಡಲು ಮಂಡಳಿ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿಯಂತೆ 67 ಸಾವಿರ ಕಾರ್ಮಿಕರಿಗೆ ಒಟ್ಟು 19 ಕೋಟಿ 74 ಲಕ್ಷ ರೂಗಳನ್ನು ಖರ್ಚು ಮಾಡಿರುವ ಬಗ್ಗೆ ತಿಳಿಸಿರುತ್ತಾರೆ ಎಂದು ಹೇಳಿದರು.

ಹೋಟೆಲ್‍ನಲ್ಲಿ ಇಡ್ಲಿ, ಸಾಂಬಾರ್ ಮತ್ತು ಚಟ್ನಿಗೆ ಬೇರೆ ಬೇರೆ ದರ ನಿಗದಿ ಮಾಡಿದರೆ ಹೇಗಿರುತ್ತದೋ ಹಾಗೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ದರ ನಿಗದಿಪಡಿಸಿ ಹಣವನ್ನು ಡ್ರಾ ಮಾಡಿ ಅವ್ಯವಹಾರ ಮಾಡಿದ್ದಾರೆ ಎಂದು ಕೆ.ಎಸ್ ನವೀನ್ ಅವರು ಆರೋಪಿಸಿದರು. ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ನಿಗದಿ ಪಡಿಸಿರುವ ಆರೋಗ್ಯ ತಪಾಸಣೆ ವೆಚ್ಚಕ್ಕಿಂತ ಒಂದುವರೆ ಪಟ್ಟು ಜಾಸ್ತಿ ನಿಗದಿ ಪಡಿಸಿ ತಪಾಸಣೆಯ ಹಣವನ್ನು ಪಾವತಿ ಮಾಡಿದ್ದಾರೆ. ಇದೆಲ್ಲದಕ್ಕಿಂತ ಮುಖ್ಯಅಂಶವೇನೆಂದರೆ ರಕ್ತ ತಪಾಸಣೆಯ ಮೊದಲೇ ವೈದ್ಯರ ತಪಾಸಣೆಯನ್ನು ಮುಗಿಸಿರುವ ಬಗ್ಗೆ ವರದಿಯನ್ನು ನೀಡಿದ್ದಾರೆ. ರಕ್ತದ ಲ್ಯಾಬ್‍ನಲ್ಲಿ ಸಿಗುವಂತಹ ರಕ್ತದಲ್ಲಿ ಅಥವಾ ಪ್ರಾಣಿಗಳ ರಕ್ತವನ್ನು ಬಳಕೆ ಮಾಡಿ ಸದರಿ ರಕ್ತದಿಂದ ತಪಾಸಣೆ ವರದಿಯನ್ನು ತಯಾರಿಸಿದ್ದಾರೆ ಎಂದು ಆರೋಪಿಸಿದರು.

ಇಲಾಖೆ ನೀಡಿರುವ ಮಾಹಿತಿಯಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಚಿತ್ರದುರ್ಗ ಜಿಲ್ಲೆಯ 5 ಕಾರ್ಮಿಕರ ಸಂಘಟನೆಗಳ ಪೈಕಿ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿರುವ ಕಟ್ಟಡ ಕಾರ್ಮಿಕರ ಸಂಖ್ಯೆ ಕೇವಲ 6 ಸಾವಿರ. ಆದರೆ ಸರ್ಕಾರದ ಲೆಕ್ಕದಲ್ಲಿ 33,500 ಕಟ್ಟಡ ಕಾರ್ಮಿಕರ ವಿವರ ಇರುತ್ತದೆ ಎಂದು ಆರೋಪಿಸಿದರು. ಮಂಡಳಿಯು 15 ದಿನಗಳ ಕ್ಯಾಂಪ್ ಮಾಡಿ 33500 ಜನಕ್ಕೂ ತಪಾಸಣೆ ಮಾಡಿದ್ದು, ಒಬ್ಬ ಕಾರ್ಮಿಕನಿಗೆ 2,940 ರೂ ಮೊತ್ತದಂತೆ ಆರೋಗ್ಯ ತಪಾಸಣೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ. ತಪಾಸಣೆ ಮಾಡಿರುವ ಆಸ್ಪತ್ರೆಯ ಮುದ್ರೆ ಮತ್ತು ಸಹಿ ಇರುವುದಿಲ್ಲ. ಮಂಡಳಿ ನಿಗದಿ ಪಡಿಸಿರುವ 20 ಟೆಸ್ಟ್ ಆರೋಗ್ಯ ತಪಾಸಣೆಯಲ್ಲಿ ಸುಮಾರು 16 ಟೆಸ್ಟ್‍ಗಳು ರಕ್ತ ಸಂಬಂಧಿಸಿದಂತೆ ಇದೆ. ಆದರೆ ಒಂದು ಬಾರಿ ಮಾಡುವ ರಕ್ತದ ಟೆಸ್ಟ್ ಅನ್ನು ಒಂದೊಂದು ಟೆಸ್ಟ್‍ಗಳಿಗೆ ಪ್ರತ್ಯೇಕ ಟೆಸ್ಟ್ ದರವನ್ನು ತೋರಿಸುವ ಮೂಲಕ ಅವ್ಯವಹಾರ ಮಾಡಿದ್ದಾರೆ ಎಂದು ದೂರಿದರು.

Post a Comment

0Comments

Post a Comment (0)