ಮಲ್ಪೆ(ಉಡುಪಿ):ಜಿಲ್ಲೆಯಲ್ಲಿರುವ ಮಲ್ಪೆ ಮೀನುಗಾರಿಕಾ ಬಂದರಿಗೆ ಏಷ್ಯಾದಲ್ಲೇ ಏಕೈಕ ಸರ್ವಋತು ಬಂದರು ಎಂಬ ಬಿರುದಿದೆ. ಈ ಸರ್ವಋತು ಬಂದರಿನಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಆಳ ಸಮುದ್ರ ಮೀನುಗಾರಿಕೆ ಚಟುವಟಿಕೆಗಳು ಗರಿಗೆದರಿವೆ. ಇದರ ಆರಂಭಿಕ ಹಂತದಲ್ಲಿ ಮೀನುಗಾರರ ಸಂಘದ ವತಿಯಿಂದ ಈ ಸಲದ ಮೀನುಗಾರಿಕಾ ಋತು ಸಂಪದ್ಭರಿತವಾಗಿರಲಿ ಎಂದು ಮೀನುಗಾರರು ಸಾಮೂಹಿಕ ಸಮುದ್ರ ಪೂಜೆ ಮಾಡಿದರು. ಅನಾದಿಕಾಲದಿಂದಲೂ ಭಕ್ತಿ, ಶ್ರದ್ಧೆಯಿಂದ ನಂಬಿಕೊಂಡು ಬಂದಿರುವ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಮಳೆಗಾಲದ ನಿಷೇಧ ಮುಕ್ತಾಯ:ಜೂ.1ರಿಂದ ಎರಡು ತಿಂಗಳ ನಿಷೇಧ ಬಳಿಕ 2025ನೇ ಸಾಲಿನ ಮೀನುಗಾರಿಕೆ ಋತು ಆ.1ರಿಂದ ಆರಂಭಗೊಂಡಿದೆ. ಹವಾಮಾನ ವೈಪರೀತ್ಯ ಗಮನಿಸಿ, ಟ್ರಾಲ್ ಬೋಟ್ ಮೀನುಗಾರಿಕೆ ಆರಂಭಗೊಳ್ಳುತ್ತಿದ್ದರೆ, ಪರ್ಸಿನ್ ಬೋಟ್ ಮೀನುಗಾರಿಕೆ ಕೂಡ ಇಷ್ಟರಲ್ಲೇ ಪ್ರಾರಂಭಗೊಳ್ಳುತ್ತಿದೆ. ಮೀನುಗಾರಿಕೆ ಇಲಾಖೆ ನಿಯಮದಂತೆ ಆ.1ರಿಂದ ಮೀನುಗಾರಿಕೆ ಆರಂಭಿಸಲು ಅನುಮತಿ ನೀಡಲಾಗಿತ್ತು.
ಬೋಟುಗಳನ್ನು ಕಡಲಿಗಿಳಿಸಲು ಪೂರ್ವ ಸಿದ್ಧತೆ:ತೆರಿಗೆರಹಿತ ಡೀಸೆಲ್ ಪೂರೈಕೆ ಮಾಡಿದ್ದು, ಟ್ರಾಲ್ ಬೋಟ್‌ನವರು ಕಡಲಿಗೆ ಇಳಿಯಲಿದ್ದು, ಮಂಜುಗಡ್ಡೆ ತುಂಬಿಸುವ, ಬಲೆ ಸರಿಪಡಿಸುವ ಕಾರ್ಯ ಈಗ ನಡೆಯುತ್ತಿದೆ. ಕಳೆದ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಜತೆಗೆ ಫೆಬ್ರವರಿ ತಿಂಗಳನಿಂದಲೇ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯೊಂದಿಗೆ ಧಕ್ಕೆ ಪ್ರದೇಶಗಳಲ್ಲಿ ಮೀನುಗಾರರು ಪೈಂಟಿಂಗ್, ಎಂಜಿನ್ ದುರಸ್ತಿ, ಬಲೆ ದುರಸ್ತಿ, ಡೀಸೆಲ್ ಪಡೆಯಲು ಬೇಕಾದ ಪ್ರಕ್ರಿಯೆಗಳು ಸೇರಿದಂತೆ ಬೋಟುಗಳನ್ನು ಕಡಲಿಗಿಳಿಸಲು ಪೂರ್ವಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಮೀನುಪ್ರಿಯರ ಕಂಗೆಡಿಸಿದ್ದ ದರ: ಯಾಂತ್ರೀಕೃತ ಮೀನುಗಾರಿಕೆ ನಿಷೇದ ಸಂದರ್ಭ ಕರಾವಳಿಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೂಲಕ ನಡೆಸಲಾಗುವ ನಾಡದೋಣಿ ಮೀನುಗಾರಿಕೆ ಚುರುಕು ಪಡೆಯುತ್ತದೆ. ಎರಡು ತಿಂಗಳ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಯೂ ಕ್ಷೀಣವಾಗಿದೆ. ಈ ವರ್ಷದ ಮಳೆಗಾಲದಲ್ಲಿ ಮಾರುಕಟ್ಟೆಗಳಲ್ಲಿ ತಾಜಾ ಮೀನಿನ ಕೊರತೆ ಜತೆಗೆ ಮೀನಿನ ದರವೂ ಮೀನು ಪ್ರಿಯರನ್ನು ಕಂಗೆಡಿಸಿತ್ತು. ಪ್ಯಾಕ್ ಮಾಡಿ ಐಸ್‌ನಲ್ಲಿ ಇರಿಸಲಾದ ಮೀನಿನ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಒಡಿಸಾ ರಾಜ್ಯಗಳ ತಾಜಾ ಮೀನು ಮಾರುಕಟ್ಟೆಗೆ ಬರುತ್ತಿದ್ದವು. ದರವೂ ಜಾಸ್ತಿ ಇತ್ತು.
ನಾಳೆ ಆಗಸ್ಟ್ 10ರ ನಂತರ ತಾಜಾತಾಜಾ ಮೀನು: ಹೊಸ ಋತುವಿನ ಮೀನುಗಾರಿಕೆ ಬಗ್ಗೆ ಮಾತನಾಡಿರುವ ಮೀನುಗಾರಿಕೆ ಬೋಟ್ ಮಾಲಕ ಕುಂದರ್, "ಈ ವಾರ ಯಾಂತ್ರೀಕೃತ ಮೀನುಗಾರಿಕೆ ಪೂರ್ಣಪ್ರಮಾಣದಲ್ಲಿ ನಡೆಯುವುದರಿಂದ ಆಗಸ್ಟ್ ಹತ್ತರ ನಂತರ ಮೀನುಪ್ರಿಯರಿಗೆ ಕಡಿಮೆ ದರದಲ್ಲಿ ಮೀನು ಸಿಗಲಿದೆ. ಸದ್ಯ ಆಳಸಮುದ್ರ ಮೀನುಗಾರರು ಸಮುದ್ರಕ್ಕೆ ಇಳಿಯಲು ತಯಾರಿ ನಡೆಸುತ್ತಿದ್ದಾರೆ. ಮುಂಗಾರು ಕೂಡ ಕ್ಷೀಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ ಹತ್ತರ ಬಳಿಕ ಮಾರುಕಟ್ಟೆಗೆ ಮೀನು ಲಭ್ಯವಾಗಲಿದೆ" ಎಂದು ಮಾಹಿತಿ ನೀಡಿದರು.