ಯುವ ಕಾಂಗ್ರೆಸ್ ಮೂಲಕ ಬೆಳೆದವರು ಕಾಂಗ್ರೆಸ್ ಪಕ್ಷದ ಆಸ್ತಿಗಳಾಗಿದ್ದಾರೆ: ಮಾಜಿ ಸಂಸದ ಡಿ.ಕೆ.ಸುರೇಶ.

Udayavani News
0
ರಾಮನಗರ, ಮೇ 3: "ರಾಜ್ಯದ ಮಂತ್ರಿ ಮಂಡಲದಲ್ಲಿರುವ ಶೇ 50 ಕ್ಕೂ ಹೆಚ್ಚು ನಾಯಕರು ಯುವ ಕಾಂಗ್ರೆಸ್ ನಿಂದ ಬಂದವರು. ರಾಮಲಿಂಗಾರೆಡ್ಡಿ ಅವರು, ಯು.ಟಿ.ಖಾದರ್ ಅವರು, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೀಗೆ ಹಲವಾರು ನಾಯಕರು ಕಾಂಗ್ರೆಸ್ ಪಕ್ಷದ ಆಸ್ತಿಗಳಾಗಿ ಬೆಳೆದಿದ್ದಾರೆ" ಎಂದು ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.

ರಾಮನಗರದಲ್ಲಿ ಮೇ 11 ರಂದು ನಡೆಯುವ ಯುವ ಕಾಂಗ್ರೆಸ್ ಸಮಾವೇಶದ ಪೂರ್ವಸಿದ್ಧತೆ ಹಾಗೂ ಪಕ್ಷ ಸಂಘಟನೆಗೆ ಚನ್ನಪಟ್ಟಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಡಿ ಕೆ ಸುರೇಶ್ ಅವರು ಮಾತನಾಡಿದರು.

"ಅವಕಾಶಗಳು ನಮ್ಮನ್ನ ಹುಡುಕಿ ಬರುವುದಿಲ್ಲ ನಾವು ಅವಕಾಶಗಳನ್ನು ಹುಡುಕಿ ಹೋಗಬೇಕು. ಕಷ್ಟಪಟ್ಟರೆ ಫಲಸಿಕ್ಕೆ ಸಿಗುತ್ತದೆ. ನೀವು ಅವಕಾಶ ಹುಡುಕಿದರೆ ಮಾತ್ರ, ನೀವು ಕೆಲಸ ಮಾಡಿದರೆ ಮಾತ್ರ ನಿಮ್ಮ ಆಲೋಚನೆಗಳು ಸರಿಯಾಗಿದ್ದರೆ ಮಾತ್ರ ನಿಮ್ಮ ನಾಯಕತ್ವ ಬೆಳಸಲು ಸಾಧ್ಯ ಜನಸೇವೆ ಮಾಡಲ್ಲಿಕ್ಕೆ ಸಾಧ್ಯ" ಎಂದರು‌.

"ರಾಹುಲ್ ಗಾಂಧಿಯವರು ಯುವ ಕಾಂಗ್ರೆಸ್ ಮೂಲಕ ಎಲ್ಲರಿಗೂ ವೇದಿಕೆ ಕೊಟ್ಟಿದ್ದಾರೆ. ಯುವಕರು ಇಲ್ಲ ಎಂದರೆ ಸಂಘಟನೆ ಕಷ್ಟ. ಯೋಗೆಶ್ವರ್ ಅವರು 35 ವರ್ಷ ಇದ್ದಾಗಲೆ ಶಾಸಕರಾಗಿ ಆಯ್ಕೆಯಾದವರು. ಯಾರೇ ರಾಜಕೀಯದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರೆ ಯುವಕರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಬೇಕು. ಅವರ ಸಮಸ್ಯೆಗಳನ್ನು ನಿವಾರಿಸಬೇಕು" ಎಂದರು.

"ರಾಮನಗರ ಜಿಲ್ಲೆಯ ರಾಜಕಾರಣಿಗಳು ಯಾವುದೇ ಕಾರಣಕ್ಕೂ ಯುವಕರನ್ನು ಕಡೆಗಣಿಸಬಾರದು. ಪ್ರತಿ ಬೂತ್ ಮಟ್ಟದಲ್ಲಿ 20- 25 ಯುವಕರ ಪಡೆ ಕಟ್ಟಬೇಕು. ಒಬ್ಬಿಬ್ಬರಿಗೆ ಇಂತಿಷ್ಟು ಜನರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಗುರಿ ನೀಡಬೇಕು. ಯುವ ಕಾಂಗ್ರೆಸ್ ಸಮಾವೇಶಕ್ಕೆ ಕನಿಷ್ಠ 10 ಸಾವಿರ ಜನರು ಇಂತಹ ಯುವಕರ ಪಡೆಯಿಂದ ಬರಬೇಕು. ಇದಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ನಾವು ಮತ್ತು ನಮ್ಮ ನಾಯಕರು ಮಾಡುತ್ತಾರೆ" ಎಂದು ಹೇಳಿದರು.

"ಚಂದ್ರಸಾಗರ್ ಅವರು ಸುಮಾರು 22ಸಾವಿರ ಮತಗಳನ್ನು ಪಡೆದು ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾವು ಚುನಾವಣೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೆಂಪುರಾಜು ಅವರು ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು" ಎಂದು ಹೇಳಿದರು.

"ಕಾಶ್ಮೀರದಿಂದ ಕನ್ಯಾಕುಮಾರಿಯವರೆಗು ಇಡೀ ದೇಶದ ಚಿತ್ರಣ ಯಾರಿಗಾದರೂ ತಿಳಿದಿದೆ ಅಂದ ಅದು ಬಿ.ವಿ. ಶ್ರೀನಿವಾಸ್ ಅವರಿಗೆ ಮಾತ್ರ. ಇವರು ನಮ್ಮ ರಾಜ್ಯದವರು. ನಾನು ಸಂಸದನಾಗಿದ್ದಾಗ ನನ್ನ ಮನೆಯನ್ನೇ ಅವರಿಗೆ ಬಿಟ್ಟುಕೊಟ್ಟಿದ್ದೆ. ದೇಶದ ಅನೇಕ ರಾಜ್ಯಗಳಲ್ಲಿ ಪಕ್ಷದ ಪರವಾಗಿ ಹೋರಾಟ ಮಾಡಿ ಕೇಸನ್ನು ಹಾಕಿಸಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಆಕ್ಸಿಜನ್ ನೀಡಿ ಜನಸೇವೆ ಮಾಡಿದವರು. ಈತ ಶಿವಕುಮಾರ್ ಮಗ ಅಥವಾ ಸಿದ್ದರಾಮಯ್ಯ ಅವರ ಮಗನಲ್ಲ. ಸಾಮಾನ್ಯ ಕುಟುಂಬದಿಂದ ಬಂದವನು. ಈತ ಬೆಳೆಯಲು ಯುವ ಕಾಂಗ್ರೆಸ್ ಕಾರಣ‌‌‌" ಎಂದರು.

"ಸಮಾವೇಶದ ದಿನದಂದೆ ಜಿಲ್ಲೆಯ ಕಾಂಗ್ರೆಸ್ ಕಚೇರಿಗೆ ಅಡಿಪಾಯ ಹಾಕಲಾಗುವುದು. ಸುಮಾರು 10 ಸಾವಿರ ಚದರಡಿ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಾವು ಜಿಲ್ಲೆಗೆ ಮಾತು ಕೊಟ್ಟಂತೆ ಅನೇಕ ಕೆಲಸಗಳನ್ನು ನೀರಾವರಿ ಇಲಾಖೆಯಿಂದ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ" ಎಂದರು. 

"ಜಿಲ್ಲೆಯ ಜನರನ್ನು, ಕಾರ್ಯಕರ್ತರನ್ನು ಬಿಡುವ ಮಾತೇ ಇಲ್ಲ. ನಿಮ್ಮ ವಿಶ್ವಾಸವನ್ನು ನಾವು ಕಳೆದುಕೊಳ್ಳುವುದಿಲ್ಲ. ಮತ್ತೆ ಜಿಲ್ಲೆಯಲ್ಲಿ 2028 ಕ್ಕೆ ನಾಲ್ಕು ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಾಣ ಮಾಡುತ್ತೇವೆ. ಪಕ್ಷವನ್ನು, ನಿಮ್ಮನ್ನು ಬಲಿಷ್ಠ ಮಾಡುವುದೇ ನಮ್ಮ ಉದ್ದೇಶ" ಎಂದು ಹೇಳಿದರು.

Post a Comment

0Comments

Post a Comment (0)