ಆಲಮೇಲ್ : ನಿತ್ಯವೂ ನೂರಾರು ಬಸ್‌ಗಳ ಓಡಾಟ, ಸಾವಿರಾರು ಜನರ ಪಯಣ, ಸದಾ ಜನಸಂಖ್ಯೆಯಿಂದ ತುಂಬಿ ತುಳುಕುವ ಈ ಬಸ್ ನಿಲ್ದಾಣ ಸರಿಯಾದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಅಲ್ಲದೇ ಬಸ್ ನಿಲ್ದಾಣ ಸುತ್ತ ಮುತ್ತ ಎಲ್ಲೆಂದರಲ್ಲಿ ಕಸ, ಮಲ-ಮೂತ್ರ ವಿಸರ್ಜನೆ, ಗುಟ್ಕಾದ ಉಗುಳು, ಬಸ್ಟ್ಯಾಂಡಿನ ಒಳಗೆ ಅನಗತ್ಯ ವಾಹನ ನಿಲುಗಡೆ, ಅಲ್ಲಲ್ಲಿ ನಿಂತಿರುವ ನೀರು, ಮುಖ್ಯವಾಗಿ ಬೇಸಿಗೆಯಲ್ಲೆ ಡ್ರೈನೇಜ್ ನೀರು ಹರಿಯದೇ ನಾರುತ್ತಿರುವ ಚರಂಡಿ.. ಇದು ನೂತನ ತಾಲ್ಲೂಕು ಆಲಮೇಲ ನಗರದ ತಾಲ್ಲೂಕು ಕೇಂದ್ರ ಬಸ್ ನಿಲ್ದಾಣದ ಇಂದಿನ ಸ್ಥಿತಿ.
ನಗರದ ಬಸ್ ನಿಲ್ದಾಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಶುಚಿತ್ವ ತಾಂಡವಾಡುತ್ತಿದೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿರುವ ಆಲಮೇಲ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತುಕೊಳ್ಳಲು ಪೂರಕ ವಾತಾವರಣ ಇಲ್ಲ. ಬಸ್ ನಿಲ್ದಾಣದ ಸುತ್ತ ಅಶುಚಿತ್ವದಿಂದಾಗಿ ನಾಗರಿಕರು ಹಾಗೂ ಪ್ರಯಾಣಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.
ಶುಚಿತ್ವದ ಕೊರತೆ : ನಗರದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸುಸಜ್ಜಿತ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಸ್ ನಿಲ್ದಾಣದ ಸುತ್ತ ಎಲ್ಲೆಂದರಲ್ಲಿ ಕಸ ಚೆಲ್ಲಾಡುತ್ತಿದ್ದು, ಅಶುಚಿತ್ವ ತಾಂಡವಾಡುತ್ತಿದೆ. ಇಷ್ಟಾದರೂ ಸಂಭಂದಿಸಿದ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.
ಆಲಮೇಲ ನಗರ ಸ್ವಚ್ಛತೆ ಸುಂದರ ಕಾಪಾಡುವ ದೃಷ್ಟಿಯಿಂದ ಶಾಸಕರು ಸಾಕಾದಷ್ಟು ಶ್ರಮಿಸುತ್ತಿದ್ದಾರೆ ಮತ್ತು ನಗರದ ಅಭಿವೃದ್ಧಿ ಅನುದಾನ ತಂದು ಲಕ್ಷಾಂತರ ರೂ. ವ್ಯಯ ಮಾಡುತ್ತಿದೆ. ಆದರೆ ಯಾಕೋ ಏನೋ ನಗರದ ಬಸ್ ನಿಲ್ದಾಣ ಈ ಎಲ್ಲದರಿಂದ ವಂಚಿತವಾದಂತಾಗಿದೆ. ನಗರದ ಜನತೆಗೆ ಸ್ವಚ್ಛತೆ ಬಗ್ಗೆ ಪಾಠ ನೀಡುತ್ತಿರುವ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ತನ್ನ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣದ ಬಗ್ಗೆ ಗಮನ ನೀಡುತ್ತಿಲ್ಲ ಎಂಬುದು ಹಲವರ ಆರೋಪಕ್ಕೂ ಕಾರಣವಾಗಿದೆ.
ಚರಂಡಿ ವಾಸನೆ : ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ ಒಂದು ಕಡೆಯಾದರೆ ಬೆಳಗ್ಗೆ ಸ್ವಚ್ಛತೆಗೆ ಬಳಸುವ ನೀರು ಹೊರಕ್ಕೆ ಹರಿಯಲು ಅವಕಾಶವಿಲ್ಲದೇ ಬಸ್ ನಿಲ್ಲುವ ಸ್ಥಳಗಳಲ್ಲಿ ದಿನವಿಡೀ ನಿಂತಿರುತ್ತದೆ. ಇನ್ನೂ ನಿಲ್ದಾಣದ ಮುಂಭಾಗದಲ್ಲಿರುವ ಚರಂಡಿ ಕಸ, ಕಡ್ಡಿಗಳಿಂದ ತುಂಬಿದ್ದು, ಕೊಳಕು ನೀರು ತುಂಬಿಕೊಂಡು ನಾರುತ್ತಿದೆ. ಅಲ್ಲದೇ ಈ ನೀರಿಗೆ ಸಾಕಷ್ಟು ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಜನರಿಗೆ ಮಲೇರಿಯಾ ಅಂಟಿಕೋಳುತ್ತಿದೆ.
ಅನಗತ್ಯ ವಾಹನಗಳ ತಾಣ : ನಗರದ ಬಸ್ ನಿಲ್ದಾಣದ ಒಳಗೆ ಆಟೋ, ಕಾರು, ಬೈಕ್ ನಿಯಂತ್ರಣ ಯಾರೂ ಮಾಡುತ್ತಿಲ್ಲ. ಅನಧಿಕೃತವಾಗಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ನಿಲುಗಡೆಗೊಳ್ಳುತ್ತಿದ್ದರೂ ಸಾರಿಗೆ ಸೆಕ್ಯುರಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಬಸ್ ನಿಲ್ದಾಣಗಳಿಗೆ ಬರುವ ಪ್ರಯಾಣಿಕರಿಗೆ ಸರಿಯಾದ ರೀತಿ ಶೌಚಾಲಯ ವ್ಯವಸ್ಥೆ ಇಲ್ಲ. ನಿಲ್ದಾಣದಲ್ಲಿರುವ ಗಂಡಸರ ಮತ್ತು ಹೆಂಗಸರ ಶೌಚಾಲಯ ದುಸ್ಥಿತಿಯಂತೂ ಹೇಳತೀರದಾಗಿದೆ. ಇಷ್ಟಿದ್ದರೂ ಶೌಚಾಲಯಗಳಲ್ಲಿ ನಿಯಮಕ್ಕಿಂತ ಅಧಿಕ ಶುಲ್ಕ ವಸೂಲಿ ನಡೆಯುತ್ತಿದೆ ಎಂದು ಕೇಳಿಬರುತ್ತಿದೆ. ನಗರದ ನಿಲ್ದಾಣದಲ್ಲಿ ಈ ಚಟುವಟಿಕೆ ನಡೆಯುತ್ತಿವೆ ಎಂಬುದು ಹಲವರ ದೂರು.
ಒಟ್ಟಿನಲ್ಲಿ ಹಲವು ನ್ಯೂನತೆಗಳಿಂದ ಬಳಲುತ್ತಿರುವ ನಗರದ ಬಸ್ ನಿಲ್ದಾಣ ಸುಂದರ ಆಲಮೇಲ ನಗರ ಕನಸು ಕಾಣುವದು ಸರಿಯೇ ಎಂದು ಜನರ ಮಾತು . ಇನ್ನಾದರೂ ಬಸ್ ನಿಲ್ದಾಣದತ್ತ ಸಾರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ನ್ಯೂನತೆ ಸರಿಪಡಿಸುವ ಮೂಲಕ ಬಸ್ ನಿಲ್ದಾಣವನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ವಹಿಸಬೇಕಿದೆ.
ಆಲಮೇಲದ ಗೌರವ ಕಾಪಾಡಿ:
ತಾಲ್ಲೂಕ ಕೇಂದ್ರ ಬಸ್ ನಿಲ್ದಾಣದಲ್ಲಿ ಹಲವು ಸಮಸ್ಯೆಗಳಿವೆ. ನಿಲ್ದಾಣದ ನೈಜ್ಯ ಸ್ಥಿತಿ ಬಗ್ಗೆ ಈಗಾಗಲೇ ಸಂಭವಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನ್ಯೂನತೆ ಬಗ್ಗೆ ವಿಶೇಷ ಗಮನ ಹರಿಸಿ ಆಲಮೇಲದ ಗೌರವ ಕಾಪಾಡುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.
.ಬಸವರಾಜ ಹೂಗಾರ
ತಾಲ್ಲೂಕ ಹೋರಾಟ ಸಮಿತಿ ಸದಸ್ಯರು