೧• ಕಂದಾಯ ಗ್ರಾಮ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕುಪತ್ರ
೨•ವರ್ಷಾಂತ್ಯದೊಳಗೆ ಎಲ್ಲರಿಗೂ ಪೋಡಿ ದುರಸ್ಥಿ
೩• ಯಶಸ್ಸಿನತ್ತ ಭೂ ಸುರಕ್ಷಾ ಯೋಜನೆ
ಬೆಂಗಳೂರು ಏಪ್ರಿಲ್ 25:ರಾಜ್ಯ ಸರ್ಕಾರದ ಎರಡು ವರ್ಷಗಳ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಮೇ.20 ರಂದು ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಹಾಡಿ, ಹಟ್ಟಿ, ತಾಂಡಾಗಳು ಸೇರಿದಂತೆ ಜನ ವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಅಂಗೀಕರಿಸದ ಕಾರಣ ಅಲ್ಲಿನ ನಿವಾಸಿಗಳು ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಕಳೆದ ಎರಡು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಯಿತು. ಅದರಂತೆ ಹಟ್ಟಿ, ತಾಂಡಾ ನಿವಾಸಿಗಳ ತ್ರಿಶಂಕು ಸ್ಥಿತಿ ನಿವಾರಿಸಲು ಹಾಗೂ ಅವರಿಗೆ ಶಾಶ್ವತ ನೆಮ್ಮದಿ ನೀಡುವ ಸಲುವಾಗಿ ತಾಂಡಾಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮುಂದುವರೆದು, “ ಹಟ್ಟಿ, ತಾಂಡಾ ನಿವಾಸಿಗಳ ಮನೆಗಳಿಗೆ ಕಾನೂನಿನ ಆಸರೆ ನೀಡಬೇಕು ಎಂಬ ಉದ್ದೇಶದಿಂದ 2016-17ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕಾನೂನು ರಚಿಸಿತ್ತು. ಇದರ ಸಹಾಯದಿಂದ ಹಿಂದಿನ ಸರ್ಕಾರ ಐದು ವರ್ಷದಲ್ಲಿ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದೆ. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಒಂದೂವರೆ ವರ್ಷದಲ್ಲಿ 3,221 ಜನ ವಸತಿ ಪ್ರದೇಶಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರಕಾರ 14,62,344 ಕುಟುಂಬಗಳಿಗೆ 94 ಡಿ ಕರ್ನಾಟಕ ಭೂ ಕಂದಾಯ ಕಾನೂನು ಅಡಿ ಹಕ್ಕುಪತ್ರ ನೀಡಲು ತಯಾರಾಗಿದೆ. ಮೇ.20ಕ್ಕೆ 1 ಲಕ್ಷ ಕುಟುಂಬಗಳಿಗೆ ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಿಸಲಿದ್ದಾರೆ. ಈ ವರ್ಷದ ಅಂತ್ಯಕ್ಕೆ ನಾನಾ ಕಾರಣಗಳಿಂದಾಗಿ ಬಿಟ್ಟುಹೋದ ಜನ ವಸತಿ ಪ್ರದೇಶಗಳನ್ನೂ ಗುರುತಿಸಿ ಕನಿಷ್ಟ 2 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಮೂಲದ ಹೊಂದಲಾಗಿದೆ” ಎಂದರು.
ಡಿಜಿಟಲ್ ಹಕ್ಕುಪತ್ರ:
“ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ನಡೆಯಬಹುದಾದ ಅಕ್ರಮಗಳಿಗೂ ತಡೆಯೊಡ್ಡಿ ಅವರಿಗೆ ಶಾಶ್ವತ ನೆಮ್ಮದಿ ನೀಡಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆ ಮಾತನಾಡಿ, “ಮೊದಲೆಲ್ಲಾ ಹಕ್ಕುಪತ್ರಗಳನ್ನು ಕಾಗದಗಳಲ್ಲಿ ನೀಡಲಾಗುತ್ತಿತ್ತು. ಕೆಲವೊಮ್ಮೆ ಹಕ್ಕುಪತ್ರಗಳಿಗೆ ಮೂಲಪತ್ರ ಇಲ್ಲದೆ ಬೆಲೆ ಇಲ್ಲದಂತಾಗಿದೆ. ಕಾಗದ ಹಕ್ಕುಪತ್ರಗಳನ್ನು ತಿದ್ದುವ ಮೂಲಕ ವ್ಯಾಜ್ಯಗಳು ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಈ ಬಾರಿ ಡಿಜಿಟಲ್ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮೂಲ ದಾಖಲೆ ಕಳೆದುಹೋಗುವ ಅಥವಾ ದಾಖಲೆಗಳನ್ನು ತಿದ್ದುವ ಪ್ರಶ್ನೆಯೇ ಇಲ್ಲ. ಇದಲ್ಲದೆ, ಸರ್ಕಾರದಿಂದ ಕ್ರಯ ಪತ್ರದ ಮೂಲಕ ನೋಂದಣಿ ಮಾಡಿಸಿ ಸ್ಥಳೀಯ ಸಂಸ್ಥೆಯಿಂದ ಖಾತೆಯೂ ಮಾಡಿಕೊಡಲಾಗುವುದು. ಹೀಗಾಗಿ ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಸಾಧ್ಯತೆಯೇ ಇಲ್ಲ” ಎಂದರು.
*ವರ್ಷಾಂತ್ಯದೊಳಗೆ ಎಲ್ಲರಿಗೂ ಪೋಡಿ ದುರಸ್ಥಿ*
“ದಶಕಗಳ ಹಿಂದೆ ಸರ್ಕಾರದಿಂದ ಭೂ ಮಂಜೂರಾಗಿದ್ದರೂ, ಪಕ್ಕಾ ದಾಖಲೆಗಳಲ್ಲಿದೆ ಪರಿತಪಿಸುತ್ತಿದ್ದ ರೈತರಿಗೆ ಈ ವರ್ಷಾಂತ್ಯದೊಳಗೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಪೋಡಿ ದುರಸ್ಥಿ ಮಾಡಿಕೊಡಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
“ರೈತರಿಗೆ ಕಳೆದ 60 ವರ್ಷಗಳಿಂದ ನಾನಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಭೂ ಮಂಜೂರಾಗಿದೆ. ಆದರೆ, ರೈತರು ಆ ಜಮೀನಿನಲ್ಲಿ ಅನುಭೋಗದಲ್ಲಿದ್ದಾರೆ, ಪಹಣಿಯಲ್ಲಿ ಅವರ ಹೆಸರಿದೆ ಎಂಬುದನ್ನು ಬಿಟ್ಟರೆ ಬೇರೆ ಯಾವ ದಾಖಲೆಗಳೂ ಇಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರು ಪಕ್ಕಾ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಕಳೆದ ಜನವರಿ ತಿಂಗಳಿಂದ ರಾಜ್ಯಾದ್ಯಂತ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಕಂದಾಯ ಮತ್ತು ಸರ್ವೇ ಇಲಾಖೆ ಒಟ್ಟಾಗಿ ಸಾಕಷ್ಟು ಅಧ್ಯಯನ ನಡೆಸಿ ಪೋಡಿ ದುರಸ್ಥಿ ಕೆಲಸಕ್ಕೆ ಸರಳೀಕೃತ ನಿಯಮ ರಚಿಸಿ ಅಧಿಸೂಚನೆ ಹೊರಡಿಸಲಾಗಿತ್ತು” ಎಂದರು.
ಮುಂದುವರೆದು, “ಕಳೆದ ಸರ್ಕಾರದ ಅವಧಿಯಲ್ಲಿ ಐದು ವರ್ಷದಲ್ಲಿ ಕೇವಲ 5800 ಜನರಿಗೆ ಮಾತ್ರ ಪೋಡಿ ದುರಸ್ಥಿ ಮಾಡಿಕೊಡಲಾಗಿತ್ತು. ಆದರೆ, ಪ್ರಸ್ತುತ ಕಳೆದ ಜನವರಿಯಿಂದ ಈವರೆಗೆ 88,886 ಮಂಜೂರಿದಾರರದ್ದು ನಾವೇ ಖುದ್ದಾಗಿ ಮನೆ ಮನೆಗೆ ತೆರಳಿ 1-5 ದಾಖಲೆ ಸಿದ್ದಪಡಿಸಿದ್ದೇವೆ. ಈ ಪೈಕಿ 30,476 ಪ್ರಕರಣಗಳಲ್ಲಿ ಸರ್ವೇ ಇಲಾಖೆಯಿಂದ ಅಳತೆ ಕೆಲಸವನ್ನೂ ಕೈಗೆತ್ತಿಕೊಂಡಿದ್ದೇವೆ. ಪ್ರತಿ ತಿಂಗಳೂ 5,000 ಪ್ರಕರಣಗಳಲ್ಲಿ ಸರ್ವೇ ಕೆಲಸ ಮಾಡಬೇಕು ಎಂಬ ಗುರಿ ಹೊಂದಲಾಗಿದೆ” ಎಂದು ಮಾಹಿತಿ ನೀಡಿದರು.
ಎಲ್ಲಾ ಸರ್ಕಾರಿ ಜಮೀನುಗಳು ಮೂರು-ನಾಲ್ಕು ತಲೆ ಮಾರುಗಳ ಹಿಂದೆ ಮಂಜೂರಾಗಿದ್ದು, ಪ್ರತಿ ಅರ್ಜಿಯ ಹಿಂದೆಯೂ 5 ರಿಂದ 15 ಜನ ವಾರಸುದಾರರಿದ್ದಾರೆ. ಎಲ್ಲರಿಗೂ ಪೋಡಿ ದುರಸ್ಥಿ ಮಾಡಿ ಈ ವರ್ಷಾಂತ್ಯದಲ್ಲಿ ಪಕ್ಕಾ ದಾಖಲೆ ಮಾಡುವ ಗುರಿ ಇದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಕೆಲವು ಪ್ರಕರಣಗಳು ಬಾಕಿ ಉಳಿದರೆ, ಮುಂದಿನ ವರ್ಷದೊಳಗೆ ಎಲ್ಲಾ ಪ್ರಕರಣಗಳನ್ನೂ ಮುಗಿಸಲು ಯತ್ನಿಸಲಾಗುವುದು ಎಂದರು.
*ಯಶಸ್ಸಿನತ್ತ ಭೂ ಸುರಕ್ಷಾ ಯೋಜನೆ*
ಭೂ ಸುರಕ್ಷಾ ಯೋಜನೆಯ ಅಡಿಯಲ್ಲಿ ವರ್ಷಾಂತ್ಯದೊಳಗೆ ತಹಶೀಲ್ದಾರ್ ಕಚೇರಿಗಳಲ್ಲಿರುವ ಎಲ್ಲಾ ಮೂಲ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆಯೂ ಗಮನ ಸೆಳೆದ ಅವರು, “ರೈತರು ತಹಶೀಲ್ದಾರ್ ಕಚೇರಿಗಳಲ್ಲಿ ತಮ್ಮ ಭೂ ದಾಖಲೆಗಳನ್ನು ತೆಗೆದುಕೊಳ್ಳಲು ಸಾಕಷ್ಟು ಪಡಿಪಾಟಲು ಪಡುತ್ತಿದ್ದಾರೆ. ಎಷ್ಟೋ ದಾಖಲೆಗಳು ಕಳೆದೇ ಹೋಗಿದ್ದರೆ, ಮತ್ತಷ್ಟು ದಾಖಲೆಗಳನ್ನು ಕಾನೂನು ಬಾಹೀರವಾಗಿ ತಿದ್ದುವ ಮೂಲಕ ರೈತರನ್ನು ಕೋರ್ಟು ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ. ರೈತರಿಗೆ ಈ ಎಲ್ಲಾ ಶೋಷಣೆಗಳಿಂದ ಮುಕ್ತಿ ನೀಡುವ ಸಲುವಾಗಿಯೇ ʼಭೂ ಸುರಕ್ಷಾʼ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಯಶಸ್ವಿಯಾದರೆ ಹಲವು ಅಕ್ರಮಗಳನ್ನು ತಡೆಯಬಹುದು. ಅಲ್ಲದೆ, ರೈತರು ಅನಗತ್ಯವಾಗಿ ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವುದರ ಜೊತೆಗೆ ಮನೆಯಿಂದ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ದಾಖಲೆ ಪಡೆದುಕೊಳ್ಳಬಹುದು ” ಎಂದು ಮಾಹಿತಿ ನೀಡಿದರು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ 31 ತಾಲೂಕುಗಳಲ್ಲಿ ಆರಂಭಿಸಿ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಪ್ರಸ್ತುತ ಉಳಿದ ತಾಲೂಕುಗಳಲ್ಲೂ ಕೆಲಸ ಆರಂಭಿಸಲಾಗಿದೆ. ಪ್ರತಿ ತಾಲೂಕು ಕಚೇರಿಗಳಲ್ಲೂ ಇರುವ ಮೂಲ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲು ಪ್ರತಿ ಕಚೇರಿಗೂ 6 ಜನ ಡಾಟಾ ಎಂಟ್ರಿ ಆಪರೇಟರ್, 6 ಕಂಪ್ಯೂಟರ್ಗಳು ಹಾಗೂ ಅಗತ್ಯ ಸ್ಕ್ಯಾನರ್ಗಳನ್ನು ನೀಡುವುದರ ಜೊತೆಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ತರಬೇತಿಯನ್ನೂ ನೀಡಲಾಗಿದೆ” ಎಂದರು.
“ರಾಜ್ಯಾದ್ಯಂತ ಮೂಲ ದಾಖಲೆಗಳು 80 ರಿಂದ 90 ಕೋಟಿ ಪುಟ ಇರುವ ಸಾಧ್ಯತೆ ಇದ್ದು, ಈಗಾಗಲೇ 18.28 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಪುಟಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಗುರಿ ಹೊಂದಲಾಗಿದೆ. ಇದಲ್ಲದೆ, ಸರ್ವೇ ಇಲಾಖೆಯ 1.34 ಕೋಟಿ ಸರ್ವೇ ಹಿಸ್ಸಾ ಹಾಗೂ ಆಕಾರ್ಬಂದ್ ಡಿಜಿಟಲೀಕರಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮುಂದಿನ ವರ್ಷ ಕಂದಾಯ ಹಾಗೂ ಸರ್ವೇ ಇಲಾಖೆಯನ್ನು ಶೇ.99 ರಷ್ಟು ಗಣಕೀಕೃತ ಇಲಾಖೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಭೂ ಮಾಪನಾ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.