ಇಂದು ವಿಧಾನಸಭೆಯಲ್ಲಿ ಬೈಲಹೊಂಗಲ ಶಾಸಕರಾದ ಕೌಜಲಗಿ ಮಹಾಂತೇಶ್ ಶಿವಾನಂದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲಾ ಮದ್ಯ ಮಾರಾಟ ಸನ್ನದುಗಳನ್ನು ನಿಯಮಿತವಾಗಿ ಮಾಸಿಕವಾಗಿ ಪರಿಶೀಲಿಸಲಾಗುತ್ತಿದ್ದು ಕಾಯ್ದೆ/ನಿಯಮ/ಸನ್ನದು ಷರತ್ತು ಉಲ್ಲಂಘನೆಯಾದಲ್ಲಿ ಅಂತಹ ಸನ್ನದುದಾರರ ವಿರುದ್ಧ ಅಬಕಾರಿ ಕಾಯ್ದೆ ಪ್ರಕರಣ ದಾಖಲಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆಗಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಏರ್ಪಡಿಸಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಅತ್ತಿಕ್ಕಲು ಕ್ರಮ ವಹಿಸಲು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಸಂರಕ್ಷಣಾಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗ್ರಾಮ ಸಭೆಗಳಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಶಾಲಾ/ಕಾಲೇಜುಗಳಲ್ಲಿ ಮದ್ಯ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ 2024-25ನೇ ಸಾಲಿನ ಜನವರಿ ಅಂತ್ಯದವರೆಗೆ 17,390 ಮೊಕದ್ದಮೆಗಳನ್ನು ದಾಖಲಿಸಿ ಅದೇ ಅವಧಿಯಲ್ಲಿ 18,253 ಆರೋಪಿತರನ್ನು ದಸ್ತಗಿರಿಗೊಳಪಡಿಸಲಾಗಿರುತ್ತದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ವಿಧಾನಸಭೆಯಲ್ಲಿ ಉತ್ತರಿಸಿದರು.