ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ತಮ್ಮ 16ನೇ ಬಜೆಟ್ ರಾಜ್ಯದ ಜನರ ಮಟ್ಟಿಗೆ ಯಾವುದೇ ವಿಷೇಶತೆಯಿಲ್ಲದ, ಯತಾಸ್ಥಿತಿ ಕಾಯ್ದುಕೊಳ್ಳುವ ಬಜೆಟ್ ಆಗಿದೆ ಎಂದು ಅಹಿಂದ ಚಿಂತಕ ವೇದಿಕೆ ರಾಜ್ಯಾಧ್ಯಕ್ಷರು ಸೈಬಣ್ಣ ಜಮಾದರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬೆಲೆ ಏರಿಕೆಗೆ ಕಡಿವಾಣ ಹಾಕುವಂತಹ ಮತ್ತು ಜನರನ್ನು ಆರ್ಥಿಕವಾಗಿ ಸಧೃಢ ಮಾಡಿ, ನೆಮ್ಮದಿಯ ನಿಟ್ಟುಸಿರು ಬಿಡುವ, ನಿರುದ್ಯೋಗ ಸಮಸ್ಯೆ ಪರಿಹರಿಸುವ ಯಾವುದೇ ಕಾರ್ಯಕ್ರಮಗಳು ಈ ಬಜೆಟ್‍ನಲ್ಲಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ ದೊಡ್ಡ ತೊಡಕಾಗಿರುವ ಭ್ರಷ್ಟಾಚಾರ ನಿಗ್ರಹಕ್ಕೆ ಮತ್ತು ದುರಾಡಳಿತವನ್ನು ಸರಿಪಡಿಸುವ ಸೂಚನೆ ಕಾಣಿಸುತ್ತಿಲ್ಲ.
ಶಿಕ್ಷಣ ಕ್ಷೇತ್ರಕ್ಕೆ ಒಂದಷ್ಟು ಹೆಚ್ಚಿನ ಮಹತ್ವ ನೀಡಿರುವುದು ಸಮಾಧಾನಕರ ವಿಚಾರವಾಗಿದೆ, ಆದರೆ ಅಧೋಗತಿಗೆ ತಲುಪಿರುವ ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಮಾಡಬೇಕಾಗಿರುವ ಕಾಯಕಲ್ಪ ಕಂಡುಬರುತ್ತಿಲ್ಲ. ಕೃಷಿ, ನೀರಾವರಿ ಮತ್ತು ರೈತರ ವಿಚಾರದಲ್ಲಿ ಯಾವುದೇ ಮಹತ್ತರವಾದ ಬದಲಾವಣೆ ತರುವಂತಹ ಕಾರ್ಯಕ್ರಮಗಳು ಇಲ್ಲ. ನೀರಾವರಿ ಕ್ಷೇತ್ರಕ್ಕೆ ಅಪಾರವಾದ ಅನುದಾನ ಬೇಕಾಗಿದ್ದು, ಅನುದಾನದ ಕೊರತೆಯಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಭಾರಿ ನೀರಾವರಿ ಯೋಜನೆಗಳು ಇನ್ನು ಒಂದು ದಶಕವಾದರೂ ಕೂಡ ಮುಗಿಯುವುದಿಲ್ಲ.
ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಭರಪೂರ ಹಣ ನೀಡಲಾಗುತ್ತಿದೆ ಎಂದು ಘೋಷಣೆಯಾಗಿದ್ದರೂ ಕೂಡ, ನೈಜವಾಗಿ ಸರ್ಕಾರದಿಂದ ಈ ಹಿಂದೆ ನೀಡಲಾಗಿರುವ ಮೊತ್ತದಲ್ಲಿ ಅಲ್ಪ ಏರಿಕೆಯಾಗಿದೆಯಷ್ಟೆ. ಈಗ ಘೋಷಣೆಯಾಗಿರುವ ಯೋಜನೆಗಳಾದ ಟನಲ್ ರೋಡ್, ಡಬಲ್ ಡೆಕ್ಕರ್ ರೋಡ್ ಬೆಂಗಳೂರಿನ ಸಮಸ್ಯಗಳಿಗೆ ಪರಿಹಾರವಲ್ಲ, ಇದು ಕೇವಲ ರಿಯಲ್ ಎಸ್ಟೇಟ್ ಕೇಂದ್ರಿತ ಯೋಜನೆಗಳಾಗಿದ್ದು, ಬೆಂಗಳೂರಿನ ಅವನತಿಗೆ ಕಾರಣವಾಗುತ್ತದೆ. ಸಾರ್ವಜನಿಕ ಸಾರಿಗೆಯಾದ ಬಸ್ ವ್ಯವಸ್ಥೆಗೆ ಕಾಯಕಲ್ಪದ ಅಗತ್ಯವಿದ್ದು, ಇದನ್ನು ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ. ಕೇವಲ ರಸ್ತೆ ಅಭಿವೃದ್ಧಿಯೆ ಬೆಂಗಳೂರಿನ ಅಭಿವೃದ್ಧಿ ಎಂದು ಸರ್ಕಾರ ಭಾವಿದೆ ಮತ್ತು ಈ ಹಿಂದೆ ಹತ್ತಾರು ಸಾವಿರ ಕೋಟಿಯನ್ನು ರಸ್ತೆಗಳಿಗೆ ಸುರಿದು ಕಮೀಷನ್ ಪಡೆದು, ಅದು “ಕಮೀಶನ್ ಬೆಂಗಳೂರು” ಬ್ರಾಂಡ್ ಆಗಿದೆಯೆ ಹೊರತು ಬ್ರಾಂಡ್ ಬೆಂಗಳೂರಿಗೆ ಯಾವುದೇ ಬದಲಾವಣೆ ತರುವುದಿಲ್ಲ. ಇನ್ನು ರಾಜ್ಯದ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳನ್ನು ಉತ್ತಮ ನಗರಗಳನ್ನಾಗಿ ಮಾಡಲು, ಹಾಗು ಸಾಕಷ್ಟು ಸಂಖ್ಯೆಯಲ್ಲಿ ದೊಡ್ಡ ಗ್ರಾಮಗಳು ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳಾಗುವ ಮಟ್ಟಕ್ಕೆ ಬೆಳದಿದ್ದು, ಅವನ್ನು ಉನ್ನತೀಕರಿಸುವ ಸೂಚನೆಗಳು ಕಾಣುತ್ತಿಲ್ಲ.
ರಾಜ್ಯದ ಯುವ ಜನತೆಗೆ ಮತ್ತು ಕ್ರೀಡಾ ವಿಷಯದಲ್ಲಿ ಸಂಪೂರ್ಣವಾಗಿ ನೀರಸದಾಯಕ ಬಜೆಟ್ ಆಗಿದ್ದು, ಕ್ರೀಡಾ ವಲಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇನ್ನು ರಾಜ್ಯದಲ್ಲಿನ ನಿರುದ್ಯೋಗ ನಿವಾರಣೆಗೆ ಪೂರಕವಾಗಿ ಬಜೆಟ್‍ನಲ್ಲಿ ಏನೂ ಕಂಡುಬರುವುದಿಲ್ಲ. ಶಿಕ್ಷಣ ಇಲಾಖೆಯಲ್ಲಿ ಕೆಲವು ಸಾವಿರ ಶಿಕ್ಷಕರ ನೇಮಕಾತಿಯ ವಿಚಾರ ಬಿಟ್ಟು, ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವ ಯಾವ ಪ್ರಸ್ತಾವು ಇಲ್ಲ. ಸರ್ಕಾರದ ನೇಮಕಾತಿಗಳಿಂದ ಮಾತ್ರ ತ್ವರಿತವಾಗಿ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ. ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ತೊಲಗಿಸದೆ, ಕೇವಲ ಕೆಲವೊಂದು ಯೋಜನೆಗಳಿಂದ ಸಾಮಾಜಿಕ ನ್ಯಾಯ ಒದಗಿಸುತ್ತೇವೆ ಮತ್ತು ಸರ್ವರನ್ನು ಅಭಿವೃದ್ಧಿ ಪಥಕ್ಕೆ ತರುತ್ತೇವೆ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ.