ಗ್ರಾಹಕರ ದಿನಾಚರಣೆ ಜನರಿಗೆ ಉತ್ತಮ ಸೇವೆ ನೀಡಲು ಕರೆ

Udayavani News
0

 


ಗ್ರಾಹಕನಿಗೆ  ಹಕ್ಕಿನ ಜೊತೆಗೆ ಜವಾಬ್ದಾರಿಯೂ ಇದೆ. ಗ್ರಾಹಕನ ಹಕ್ಕು ಮತ್ತು ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ಅವರು ತಿಳಿಸಿದರು.


 ಇಂದು ಕರ್ನಾಟಕ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2024 ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕಿನ ಜೊತೆಗೆ ಮೂಲಭೂತ ಅಶ್ಯಕತೆಗಳನ್ನು ಪಡೆಯುವ ಹಕ್ಕು, ಮಾಲಿನ್ಯ ಮುಕ್ತ ಪರಿಸರವನ್ನು ಪಡೆಯುವ ಹಕ್ಕುಗಳನ್ನು ಗ್ರಾಹಕರು ಪಡೆದಿರುತ್ತಾರೆ ಎಂದು ಗ್ರಾಹಕರ ಹಕ್ಕುಗಳ ಕುರಿತು ವಿವರಿಸಿದರು.


ಜಿಲ್ಲಾ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ, ರಾಜ್ಯ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ, ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಸಂಸ್ಥೆಗಳಿವೆ. ಗ್ರಾಹಕರ ದೂರನ್ನು ದಾಖಲಿಸಬಹುದು. ದೂರುದಾರರ ಹೆಸರು, ವಿಳಾಸ ಮತ್ತು ದೂರಿನ ವಿವರ, ಕಕ್ಷಿದಾರನ ಹೆಸರು, ವಿಳಾಸ ಮತ್ತು ವಿವರ, ನ್ಯೂನತೆಯ ಕುರಿತ ಮಾಹಿತಿ, ದಾಖಲೆಗಳನ್ನು ನೀಡಬೇಕು ಎಂದರು.


ಹಣವನ್ನು ಕೊಟ್ಟು ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವರನ್ನು ಗ್ರಾಹಕ ಎಂದು ಕರೆಯುತ್ತಾರೆ. ಆಧುನಿಕ ಮಾರುಕಟ್ಟೆ ಸಿದ್ದಾಂತವು ಗ್ರಾಹಕರನ್ನು ಮಾರುಕಟ್ಟೆಯ ರಾಜನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯ ಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹೀರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ. ಗ್ರಾಹಕನೇ ಎಚ್ಚರ ಎಂಬ ಸಿದ್ಧಾಂತಕ್ಕೆ ಬದಲಾಗಿ ಮಾರಾಟಗಾರನೇ ಎಚ್ಚರ ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಿದ್ಧಾಂತವು ಗ್ರಾಹಕನನ್ನು ವ್ಯವಹಾರ ಸಂಸ್ಥೆಗಳ ಅನುಚಿತ ವ್ಯಾಪಾರೀ ಪದ್ಧತಿಗಳಿಂದ ಹೇಗೆ ರಕ್ಷಿಸುತ್ತದೆ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲುತ್ತದೆ ಎಂದರು.


ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಕಾನೂನಾಗಿದೆ. ದೋಷಪೂರಿತ ಉತ್ಪನ್ನಗಳು, ಅತೃಪ್ತಿಕರ ಸೇವೆಗಳ ಕುರಿತು ಗ್ರಾಹಕರಿಗೆ ಈ ಕಾಯಿದೆ ಸುರಕ್ಷತೆಯನ್ನು ಒದಗಿಸುತ್ತದೆ. ಗುಣಮಟ್ಟದ ಆಹಾರ, ಔಷಧಗಳು ಗ್ರಾಹಕರಿಗೆ ಒದಗಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರವು ಕಾಲಕಾಲಕ್ಕೆ ಶಾಸನಗಳನ್ನು ರಚಿಸುವುದರ ಮೂಲಕ ಗ್ರಾಹಕರ ಹಿತಾಸಕ್ತಿ ಕಾಪಾಡಬೇಕು ಎಂದರು.


ಕಾರ್ಯಕ್ರಮದಲ್ಲಿ ಬಸವಭವನದ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನ್ಯಾಯಾಂಗ ಸದಸ್ಯರಾದ ರವಿ ಶಂಕರ್ ಅವರು ಮಾತನಾಡಿ, ತೂಕದಲ್ಲಿ ಮೋಸ, ನಿಗಧಿತ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ, ಕಳಪೆ ಗುಣಮಟ್ಟದ ವಸ್ತುವಿಗೆ ಹೆಚ್ಚಿನ ಬೆಲೆ ವಸೂಲಿ ಹೀಗೆ ಗ್ರಾಹಕರಿಗೆ ಸಂಬಂಧಿಸಿದಂತೆ ನಾನಾ ದೂರುಗಳು ಇರುತ್ತವೆ. ಗ್ರಾಹಕರು ಉತ್ಪನ್ನಗಳು ಅಥವಾ ಸೇವೆಗಳು ಅಥವಾ ಬ್ರ್ಯಾಂಡ್ ಗುಣಮಟ್ಟದ ಬಗ್ಗೆ ಅಹವಾಲುಗಳಿದ್ದಲ್ಲಿ ದೂರು ಸಲ್ಲಿಸಬಹುದು ಮತ್ತು ಅದಕ್ಕೆ ಪರಿಹಾರವನ್ನು ಪಡೆಯಹುದು. ಗ್ರಾಹಕ ನ್ಯಾಯಾಲಯಗಳಿಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಅದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆನ್‍ಲೈನ್ ಮೂಲಕವೂ ದೂರುಗಳನ್ನು ಸಲ್ಲಿಸಬಹುದು ಎಂದರು.


ಸಕ್ಷಮ ದಳ ಮತ್ತು ಐ.ಟಿ. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಪರ ನಿರ್ದೇಶಕರು ಹಾಗೂ ಕರ್ನಾಟಕ ಆಹಾರ ಮತ್ತು ನಾಗಾರಿಕ ಸರಬರಾಜು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಚಂದ್ರಕಾಂತ ಎಂ.ವಿ. ಅವರು ಮಾತನಾಡಿ, ಗ್ರಾಹಕ ಸಹಾಯವಾಣಿಯಲ್ಲಿ ಗ್ರಾಹಕರು ಯಾವುದೇ ಉತ್ಪನ್ನ ಅಥವಾ ಸೇವೆಯು ವಿರುದ್ದ ತಮ್ಮ ದೂರುಗಳನ್ನು ಸುಲಭವಾಗಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಇಲಾಖೆಯು ಶಾಲಾ ಮಕ್ಕಳಿಗೆ ಗ್ರಾಹಕ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕುಟುಂಬದ ಹಿರಿಯರು ಗ್ರಾಹಕರ ಹಕ್ಕುಗಳ ಕುರಿತು ಮಕ್ಕಳಿಗೆ ತಿಳಿಸಿಕೊಡಬೇಕು. ಗ್ರಾಹಕರು ಸರಕುಗಳನ್ನು ಖರೀದಿಸುವಾಗ ಸೀಮಿತ ಜ್ಞಾನದಲ್ಲಿ ನಕಲಿ, ಅಸಲಿಯ ಕುರಿತ ಜ್ಞಾನ, ಸಹನೆ ತಾಳ್ಮೆಯಿಂದ ಪರಿಶೀಲಿಸಿ ಖರೀದಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕರು ಶ್ರೀಮತಿ ಅನಿತಾಲಕ್ಷ್ಮಿ ಸೇರಿದಂತೆ ಹಿರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)