ಬೊಮ್ಮಾಯಿ ಸಂಪುಟಕ್ಕೆ ಏ. 24 ರ ಬಳಿಕ ಮೇಜರ್ ಸರ್ಜರಿಯಾಗಲಿದ್ದು, 20 ಹಿರಿಯ ತಲೆಗಳ ಸಚಿವ ಸ್ಥಾನಕ್ಕೆ ಕೊಕ್ ನೀಡಲಾಗುತ್ತಿದೆ. ಅವರ ಜಾಗದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಏ. 24 ರ ಬಳಿಕ ಕೇಂದ್ರದ ವರಿಷ್ಠರೇ ಬಸವರಾಜ ಬೊಮ್ಮಾಯಿ ಕೈಗೆ ಹೊಸ ಸಚಿವರ ಪಟ್ಟಿಯನ್ನು ನೀಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಗುಜರಾತ್ ಮಾದರಿ?
ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ ಮಾಡಿ ಆಡಳಿತಕ್ಕೆ ವೇಗ ನೀಡಲು ಕೇಂದ್ರ ವರಿಷ್ಠರು ತೀರ್ಮಾನಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೇಳಿಬರುತ್ತಿರುವ ಕಮೀಷನ್ ದಂಧೆ ಆರೋಪ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಇದರ ಜತೆಗೆ ಪಕ್ಷಕ್ಕಾಗಿ ಶ್ರಮಿಸಿದ ಪಕ್ಷದ ಯುವ ನಾಯಕರಿಗೆ ಅವಕಾಶ ಕಲ್ಪಿಸಿ ಎಲ್ಲರಿಗೂ ಅವಕಾಶ ಕೊಡುವ ವಿಚಾರ ಮುಂದಿಟ್ಟುಕೊಂಡು ಜಾತಿವಾರು ಹಾಗೂ ಸಮುದಾಯವಾರು ಹೊಸ ಸಚಿವರ ಪಟ್ಟಿಯನ್ನು ವರಿಷ್ಠರು ಸಿದ್ದಪಡಿಸುತ್ತಿದ್ದಾರೆ. ಸಂಪುಟ ಸರ್ಜರಿ ಕುರಿತು ಸಮಾಲೋಚನೆ ಮಾಡಲು ಪಕ್ಷದ ವರಿಷ್ಠರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಪ್ರವಾಸ ಮುಗಿಸಿ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟ ಲಾಬಿ ಶುರುವಾದರೆ ಪರಿಸ್ಥಿತಿ ನಿಭಾಯಿಸುವುದು ಸಮಸ್ಯೆಯಾಗುತ್ತದೆ. ಹೀಗಾಗಿ ಸೀಕ್ರೇಟ್ ಆಗಿ ಕೇಂದ್ರ ವರಿಷ್ಠರಿಂದ ಸಚಿವರಾಗಿ ಅಯ್ಕೆಯಾಗಿರುವರಿಗೆ ಸಂದೇಶ ಬರಲಿದೆ. ಹಿರಿಯ ನಾಯಕರಿಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ವಹಿಸಿ ಹೊಸಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಈ ಮೂಲಕ ಪಕ್ಷದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಭಿನ್ನಮತ ಸ್ಫೋಟಿಸದಂತೆ ಚಾಣಾಕ್ಷ ನಿರ್ಧಾರವನ್ನು ಬಿಜೆಪಿ ವರಿಷ್ಠರು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.