ರಾಷ್ಟ್ರೀಯ ನವಜಾತ ಶಿಶು ವಾರ ಕಾರ್ಯಕ್ರಮ


ಸಂಪಾದಕರು:ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಸಿರುಗುಪ್ಪ,ನವೆಂಬರ್ 18 : ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ನವಜಾತ ಶಿಶು ವಾರ ಕಾರ್ಯಕ್ರಮವನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ದೇವರಾಜ್ ಅವರು ಸಸಿಗೆ ನೀರರೆಯುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಹಿಳೆ ಗರ್ಭಿಣಿಯಾದಾಗಿನಿಂದ ಮಗುವಿನ ಜನನದವರೆಗೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.ಮನೆಯಲ್ಲಿ ಹೆರಿಗೆ ಮಾಡುವ ಪದ್ಧತಿಯನ್ನು ತಿರಸ್ಕರಿಸಿ ಎಲ್ಲರೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಮರಣದ ಪ್ರಮಾಣವನ್ನು ನಿಯಂತ್ರಿಸಬೇಕೆಂದು ತಿಳಿಸಿದರು.

  ವೈದ್ಯರಾದ ಪ್ರಶಾಂತ್ ಕುಮಾರ್ ಮಾತನಾಡಿ ಮಗು ಹುಟ್ಟಿದ ಮೊದಲ ವಾರದಲ್ಲಿ ಶೇ. 8ರಿಂದ 10ರವರೆಗೆ ತೂಕ ಕಳೆದುಕೊಳ್ಳುವುದು ಸಹಜ. ಪುನಃ 8-10 ದಿನಗಳಲ್ಲಿ ಮತ್ತೆ ತೂಕ ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ದಿನಕ್ಕೆ ಸರಾಸರಿ 20ರಿಂದ 40 ಗ್ರಾಂನಂತೆ ತೂಕ ಹೆಚ್ಚುತ್ತಾ ಹೋಗಬೇಕು.
ಹಾಲುಣಿಸಿದ ತಕ್ಷಣ ಮೊಸರಿನಂತಹ ವಾಂತಿ ಮಾಡಿಕೊಳ್ಳುವುದು ನವಜಾತ ಮಕ್ಕಳಲ್ಲಿ ಸಹಜ. ಹಾಲುಣಿಸಿದ ಬಳಿಕ ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡು ಬೆನ್ನು ತಟ್ಟುವುದರಿಂದ ವಾಂತಿ ಆಗುವುದನ್ನು ತಡೆಗಟ್ಟಬಹುದು. 

ಆದರೆ ವಾಂತಿಯ ಜೊತೆ ಮಗು ತೂಕ ಕಳೆದುಕೊಂಡರೆ ಅಥವಾ ಮೂತ್ರ ವಿಸರ್ಜನೆ ಕಡಿಮೆಯಾದರೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆಂದರು.

  ಈ ವೇಳೆ ದಂತ ವೈದ್ಯಾಧಿಕಾರಿ ಪವನ್ ವರ್ಮ, ಮಕ್ಕಳ ವೈದ್ಯಾಧಿಕಾರಿ ಸುಪೂರ್ಣ, ಆಪ್ತ ಸಮಾಲೋಚಕ ಮಲ್ಲೇಶಪ್ಪ, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಹಾಜರಿದ್ದರು.

Post a Comment

Previous Post Next Post